ಬೆಂಗಳೂರು: ಕಾಂಗ್ರೆಸ್ಸಿನವರು ಬಿಡುಗಡೆ ಮಾಡಿದ ವಿಡಿಯೋಕ್ಕೆ ಯಾವುದೇ ಬೆಲೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ವಿಶ್ಲೇಷಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವಿಧಾನಪರಿಷತ್ತಿನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದು, ಆ ರೀತಿಯ ವಿಡಿಯೋ ದಾಖಲೆ ನಮ್ಮ ಬಳಿ ಇಲ್ಲ ಎಂದಿದ್ದಾರೆ. ಬೈದಿರುವ ಅಥವಾ ಅಂಥ ಮಾತನಾಡಿದ ವಿಡಿಯೋ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇವರು ಬಿಡುಗಡೆ ಮಾಡುವ ವಿಡಿಯೋಗೆ ಯಾವುದೇ ಆಧಾರ ಇಲ್ಲ; ಬೆಲೆಯೂ ಇಲ್ಲ ಎಂದು ತಿಳಿಸಿದರು.
ಬಸವರಾಜ ಹೊರಟ್ಟಿ ಅವರು ಹೇಳಿದ್ದಕ್ಕೆ ಮಾತ್ರ ಬೆಲೆ ಇದೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು. ಹೈಕೋರ್ಟ್ ಕೂಡಲೇ ಸಿ.ಟಿ.ರವಿ ಅವರನ್ನು ಬಿಡುಗಡೆ ಮಾಡಲು ಹೇಳಿರುವುದರಲ್ಲಿ ನಮಗೆ ಅರ್ಧ ಜಯ ಲಭಿಸಿದೆ ಎಂದು ತಿಳಿಸಿದರು.
ಸಿ.ಟಿ.ರವಿ ಅವರನ್ನು ಇಷ್ಟೆಲ್ಲ ಓಡಾಡಿಸಿದ್ದು ಯಾಕೆ? ಕಾಡಿನಲ್ಲಿ, ಕಬ್ಬಿನ ಗದ್ದೆಯಲ್ಲಿ, ಧಾರವಾಡ, ಗದಗ, ಚಿಕ್ಕೋಡಿ ಜಿಲ್ಲೆ, ಬಾಗಲಕೋಟೆ ಜಿಲ್ಲೆ ಗಡಿ ಭಾಗ, ಈ ಥರ ನಾಲ್ಕೈದು ಜಿಲ್ಲೆಗಳಲ್ಲಿ ಕರೆದುಕೊಂಡು ಹೋಗಿ ರಾತ್ರಿಯೆಲ್ಲ ಊಟ, ನೀರು ನೀಡದೆ, ನಿದ್ರೆ ಇಲ್ಲದಂತೆ ಅತ್ಯಂತ ವಿಚಿತ್ರ ಹಿಂಸೆ ಕೊಟ್ಟಿದ್ದಾರೆ. ತಲೆಗೆ ಪೆಟ್ಟಾದರೂ ಚಿಕಿತ್ಸೆ ನೀಡಿಲ್ಲ. ಯಾಕೆ ನೀವು ಈ ಥರ ಚಿತ್ರಹಿಂಸೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು.
ಸಿ.ಟಿ.ರವಿ ಅವರ ಮೇಲೆ ಹಲ್ಲೆ ಮಾಡಲು ನೂರಾರು ಜನರು ಸುವರ್ಣಸೌಧದ ಒಳಗೆ ಹೇಗೆ ಬಂದರು ಎಂದು ಕೇಳಿದರು. ಒಳಗಡೆ ಬರಲು ಕಾರಣ ಯಾರು ಎಂದು ಪ್ರಶ್ನೆಯನ್ನೂ ಮುಂದಿಟ್ಟರು. ಯಾರ ಪತ್ರದೊಂದಿಗೆ ಒಳಗಡೆ ಬಂದಿದ್ದಾರೆ ಎಂದರು.