ಶಿವಮೊಗ್ಗ: ದೇಶಾದ್ಯಂತ ವ್ಯಾಪಿಸುತ್ತಿರುವ ಲವ್ ಜಿಹಾದ್, ಕಾರ್ಪೋರೇಟ್ ಜಿಹಾದ್ ಹಾಗೂ ಇಸ್ಲಾಂ ಪ್ರೇರಿತ ಮತಾಂತರ ಕೃತ್ಯಗಳನ್ನು ನಿಯಂತ್ರಿಸಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶುಕ್ರವಾರ ಸಾಗರ ನಗರದ ಹೋಟೆಲ್ ವೃತ್ತದಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗ ದಳದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
‘ಎನ್.ಐ.ಎ ತನಿಖೆಗೆ ಒಪ್ಪಿಸಿ’: ಸಂತೋಷ್ ಶಿವಾಜಿ ಆಗ್ರಹ
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಭಜರಂಗ ದಳದ ಜಿಲ್ಲಾ ಸಂಚಾಲಕ ಸಂತೋಷ್ ಶಿವಾಜಿ, “ಲವ್ ಜಿಹಾದ್, ಕಾರ್ಪೋರೇಟ್ ಜಿಹಾದ್ ಮತ್ತು ಇಸ್ಲಾಂ ಪ್ರೇರಿತ ಭಯೋತ್ಪಾದನೆಯು ದೇಶದ ಶಾಂತಿಯನ್ನು ಕದಡುತ್ತಿದೆ. ಹುಬ್ಬಳ್ಳಿಯಲ್ಲಿ ನಡೆದ ಜಿಮ್ ಟ್ರೈನರ್ ಕೃತ್ಯ ಹಾಗೂ ನಾಸಿಕ್‌ನ ಕಾರ್ಪೋರೇಟ್ ಜಿಹಾದ್ ಪ್ರಕರಣಗಳು ಸಾವಿರಾರು ಹಿಂದೂ ಯುವತಿಯರ ಬದುಕನ್ನು ಬೀದಿಪಾಲು ಮಾಡಿವೆ. ಇಂತಹ ಗಂಭೀರ ಪ್ರಕರಣಗಳನ್ನು ಕೇಂದ್ರ ಸರ್ಕಾರವು ಎನ್.ಐ.ಎ (NIA) ತನಿಖೆಗೆ ಒಪ್ಪಿಸಬೇಕು,” ಎಂದು ಆಗ್ರಹಿಸಿದರು.
ಇದೇ ವೇಳೆ ಸಾಗರದ ಜನತೆಗೆ ಮನವಿ ಮಾಡಿದ ಅವರು, “ಸ್ಥಳೀಯವಾಗಿ ಯಾವುದಾದರೂ ಹಿಂದೂ ಯುವತಿಯರು ಅಂತಹ ಸಂಚುಗಳಲ್ಲಿ ಸಿಲುಕಿಕೊಂಡಿದ್ದರೆ ತಕ್ಷಣ ಭಜರಂಗ ದಳಕ್ಕೆ ಮಾಹಿತಿ ನೀಡಿ. ಅಂತವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ನಾವು ಮಾಡುತ್ತೇವೆ,” ಎಂದು ಭರವಸೆ ನೀಡಿದರು.
ಹಿಂದೂ ಸಮಾಜವನ್ನು ನಿಶ್ಯಕ್ತಗೊಳಿಸುವ ಸಂಚು: ಪ್ರಶಾಂತ್ ಕೆ.ಎಸ್.
ಬಿಜೆಪಿ ಹಿಂದುಳಿದ ವರ್ಗಗಳ ಮುಖಂಡ ಪ್ರಶಾಂತ್ ಕೆ.ಎಸ್. ಮಾತನಾಡಿ, “ಹಿಂದೂ ಸಮಾಜವನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತವಾಗಿ ನಿಶ್ಯಕ್ತಗೊಳಿಸುವ ಕೃತ್ಯಗಳು ನಡೆಯುತ್ತಿವೆ. ಅನ್ಯಕೋಮಿನ ಯುವಕರು ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದು, ಸಂಬಂಧಪಟ್ಟ ಸಮಜದ ಹಿರಿಯರು ಅಂತಹ ಯುವಕರಿಗೆ ಬುದ್ಧಿ ಹೇಳಬೇಕು. ಯಾವುದೇ ಸಮಾಜ ಇಂತಹ ದುಷ್ಟ ಶಕ್ತಿಗಳ ಜೊತೆ ಕೈಜೋಡಿಸಬಾರದು,” ಎಂದು ಎಚ್ಚರಿಸಿದರು.
“ದೇಶದ ಯಾವುದೇ ಮೂಲೆಯಲ್ಲಿ ಇಂತಹ ಘಟನೆ ನಡೆದರೂ ಹಿಂದೂ ಬಾಂಧವರು ಸುಮ್ಮನೆ ಕೂರಬಾರದು. ನಾವೆಲ್ಲರೂ ಸಂಘಟಿತರಾಗಿ ಇಂತಹ ಕೃತ್ಯಗಳನ್ನು ತಡೆಗಟ್ಟಬೇಕು,” ಎಂದು ಕರೆ ನೀಡಿದರು.
ಗಣ್ಯರ ಉಪಸ್ಥಿತಿ
ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿ ಅನ್ವಿತಾ ಹಾಗೂ ಮುಖಂಡ ಸಂತೋಷ್ ಶೇಟ್ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ರಾಮು ಚವ್ಹಾನ್, ಪ್ರವೀಣ್ ಕೆ.ವಿ., ಮಂಜು ಗೌಡ, ಸುನೀಲ್ ರುದ್ರಪ್ಪ, ರಶ್ಮಿ ಹೆಗಡೆ, ಪರಶುರಾಮ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡು ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಅತ್ತೆ ಮಗಳ ಜೊತೆ ಸರಸ, ಬೇರೊಬ್ಬಳ ಜೊತೆ ವಿವಾಹ: ಇದು ವಿದ್ಯೆ ಕಲಿಸುವ ಗುರುವಿನ ‘ಅವಿದ್ಯಾವಂತ’ ವರ್ತನೆ








