ವಾಷಿಂಗ್ಟನ್: ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ ಮತ್ತು ಇರಾನ್ ನಡುವಿನ ಉನ್ನತ ಮಟ್ಟದ ಶಾಂತಿ ಮಾತುಕತೆಗಳು ಯಾವುದೇ ಒಪ್ಪಂದವಿಲ್ಲದೆ ಮುಕ್ತಾಯಗೊಂಡಿದ್ದರೂ, ಈ ಮಾತುಕತೆಗೆ ಆತಿಥ್ಯ ವಹಿಸಿದ್ದ ಪಾಕಿಸ್ತಾನದ ನಾಯಕತ್ವದ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾತುಕತೆಯ ವಿವರಗಳನ್ನು ಪಡೆದ ನಂತರ ತಮ್ಮ ‘ಟ್ರೂತ್ ಸೋಶಿಯಲ್’ (Truth Social) ಖಾತೆಯಲ್ಲಿ ಬರೆದುಕೊಂಡಿರುವ ಟ್ರಂಪ್, ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅವರನ್ನು “ಅಸಾಧಾರಣ ವ್ಯಕ್ತಿಗಳು” ಎಂದು ಬಣ್ಣಿಸಿದ್ದಾರೆ.
“ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅವರ ದಯಾಳು ಹಾಗೂ ಅತ್ಯಂತ ಸಮರ್ಥ ನಾಯಕತ್ವದಲ್ಲಿ ಈ ಸಭೆ ನಡೆದಿದೆ. ಇವರಿಬ್ಬರೂ ಅಸಾಧಾರಣ ವ್ಯಕ್ತಿಗಳು” ಎಂದು ಟ್ರಂಪ್ ಹೊಗಳಿದ್ದಾರೆ.
ಅಮೆರಿಕದ ನಿಯೋಗವನ್ನು ಮುನ್ನಡೆಸಿದ್ದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಇಸ್ಲಾಮಾಬಾದ್‌ನಲ್ಲಿ ಪಾಕ್ ನಾಯಕರು ನೀಡಿದ ಆತಿಥ್ಯವನ್ನು “ಅದ್ಭುತ” ಎಂದು ಶ್ಲಾಘಿಸಿದ್ದಾರೆ.ಕಳೆದ ವರ್ಷ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಭವಿಸಬಹುದಾಗಿದ್ದ ಭೀಕರ ಯುದ್ಧವನ್ನು ತಡೆಯುವಲ್ಲಿ ತಾವು ವಹಿಸಿದ ಪಾತ್ರಕ್ಕಾಗಿ ಪಾಕ್ ನಾಯಕರು ಪದೇ ಪದೇ ತಮಗೆ ಧನ್ಯವಾದ ಅರ್ಪಿಸುತ್ತಿದ್ದಾರೆ ಎಂದು ಟ್ರಂಪ್ ಇದೇ ಸಂದರ್ಭದಲ್ಲಿ ಹಕ್ಕು ಮಂಡಿಸಿದ್ದಾರೆ. “ಇದರಿಂದ ಸುಮಾರು 3 ರಿಂದ 5 ಕೋಟಿ ಜನರ ಜೀವ ಉಳಿದಿದೆ” ಎಂದು ಅವರು ಹೇಳಿಕೊಂಡಿದ್ದಾರೆ.
ಇರಾನ್ ತನ್ನ ಪರಮಾಣು ಹಠಮಾರಿ ಧೋರಣೆಯನ್ನು ಬಿಡದ ಕಾರಣ ಮಾತುಕತೆ ವಿಫಲವಾಗಿದೆಯೇ ಹೊರತು, ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನದ ಪ್ರಯತ್ನದಲ್ಲಿ ಕೊರತೆಯಿರಲಿಲ್ಲ ಎಂಬುದು ಅಮೆರಿಕದ ಭಾವನೆ. ಪಾಕಿಸ್ತಾನವು ಇತ್ತೀಚಿನ ದಿನಗಳಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ದೂತನಾಗಿ ಕೆಲಸ ಮಾಡುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಇಮೇಜ್ ಬದಲಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಇದೇ ಕಾರಣಕ್ಕೆ ಟ್ರಂಪ್ ಅವರು ಪಾಕಿಸ್ತಾನದ ಮೇಲೆ ಮೃದು ಧೋರಣೆ ತಳೆದಿದ್ದು, ಅವರಿಗೆ “ದಕ್ಷ ಮತ್ತು ದಯಾಳು” ಎಂಬ ಪ್ರಮಾಣಪತ್ರ ನೀಡಿದ್ದಾರೆ.








