ಪುಣೆ: ಮುಂಬೈನಿಂದ ಸೋಲಾಪುರಕ್ಕೆ ತೆರಳುತ್ತಿದ್ದ ‘ವಂದೇ ಭಾರತ್ ಎಕ್ಸ್‌ಪ್ರೆಸ್’ (ರೈಲು ಸಂಖ್ಯೆ 22225) ಸೋಮವಾರ ಸಂಜೆ ಪುಣೆ ರೈಲು ನಿಲ್ದಾಣವನ್ನು ಪ್ರವೇಶಿಸುವ ವೇಳೆ ಹಳಿ ತಪ್ಪಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಸೋಮವಾರ ಸಂಜೆ ಸುಮಾರು 7:30ಕ್ಕೆ ರೈಲು ಪುಣೆ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 3ಕ್ಕೆ ಪ್ರವೇಶಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.ರೈಲ್ವೆ ನಿಲ್ದಾಣದ ಯಾರ್ಡ್‌ನಲ್ಲಿರುವ ‘ಡೈಮಂಡ್ ಕ್ರಾಸಿಂಗ್’ (Diamond Crossing) ಮೇಲೆ ಚಲಿಸುವಾಗ ರೈಲಿನ ನಾಲ್ಕನೇ ಬೋಗಿಯ (C-15) ಒಂದು ಟ್ರೋಲಿ ಹಳಿ ತಪ್ಪಿದೆ.
ರೈಲು ನಿಧಾನಗತಿಯಲ್ಲಿ ಚಲಿಸುತ್ತಿದ್ದ ಕಾರಣ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ. ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ತಕ್ಷಣವೇ ಅವರನ್ನು ಬೋಗಿಯಿಂದ ಕೆಳಗಿಳಿಸಿ ಪ್ಲಾಟ್‌ಫಾರ್ಮ್‌ಗೆ ಸ್ಥಳಾಂತರಿಸಲಾಯಿತು.
ಈ ಘಟನೆಯಿಂದಾಗಿ ಮುಂಬೈ-ಪುಣೆ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅಡಚಣೆಯಾಗಿದ್ದು, ಸುಮಾರು 8 ರಿಂದ 9 ರೈಲುಗಳ ಸಂಚಾರ ವಿಳಂಬವಾಯಿತು.








