ಮೈಸೂರು : ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಖಜಾನೆ ಇಲಾಖೆಯಿಂದ ಬೇರೆ ಖಾತೆಗಳಿಗೆ ರೂ.180 ಕೋಟಿ ವರ್ಗಾವಣೆ ಆಗಿಲ್ಲ. ಖಜಾನೆಯಿಂದ ಇಲಾಖೆಗೆ ಹಣ ಹೋಗಿರುತ್ತದೆ. ಅಲ್ಲಿ ಅವ್ಯವಹಾರವಾಗಿರುವ ಬಗ್ಗೆ ಎಸ್.ಐ. ಟಿ ತನಿಖೆ ಮಾಡುತ್ತಿದೆ. ಸಿಬಿಐ, ಎಸ್.ಐ ಟಿ ಮತ್ತು ಇ.ಡಿ. ಹೀಗೆ ಮೂರು ಸಂಸ್ಥೆಗಳ ಮೂಲಕ ತನಿಖೆಗಳಾಗುತ್ತಿದೆ. ತನಿಖೆ ವರದಿ ಇನ್ನೂ ಬಂದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟನೇ ನೀಡಿದರು.
ಮೈಸೂರಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಬ್ಯಾಂಕುಗಳಲ್ಲಿ ಆಗುವ ಅವ್ಯವಹಾರಗಳಿಗೆಲ್ಲಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿಗಳು ರಾಜೀನಾಮೆ ನೀಡಬೇಕಲ್ಲ. ಜಿ.ಟಿ ದೇವೇಗೌಡರು ಅವರ ರಾಜೀನಾಮೆ ಕೇಳಿದ್ದಾರ? ತನಿಖೆ ನಡೆಯುತ್ತಿದ್ದು, ಪ್ರಾಥಮಿಕ ವರದಿಯಾಗಲಿ, ಅಂತಿಮ ವರದಿಯಾಗಲಿ ಯಾವುದೂ ಬಂದಿಲ್ಲ.ಖಜಾನೆಯಿಂದ ಹಣ ವರ್ಗಾವಣೆ ಆಗುವಾಗ ಪ್ರತಿ ಸಾರಿಯೂ ನನ್ನ ಬಳಿ ಬರುವುದಿಲ್ಲ. ಎಷ್ಟು ಹಣವಿದೆಯೋ ಅಷ್ಟನ್ನು ಅಧಿಕಾರಿಗಳು ಬಿಡುಗಡೆ ಮಾಡುತ್ತಾರೆ. ಅದಕ್ಕೆ ನನ್ನ ಸಹಿ ಅಗತ್ಯವಿಲ್ಲ.
ರಾಜ್ಯ ಬಿಜೆಪಿ ನಾಯಕರು ರಾಜಕೀಯವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆ ಮಾತ್ರ ರಾಜಕೀಯ ಮಾಡಲು ಗೊತ್ತಿರುವುದಲ್ಲ, ನಮಗೂ ರಾಜಕೀಯವಾಗಿ ಪ್ರತಿರೋಧ ನೀಡಲು ತಿಳಿದಿದೆ. ಬಿಜೆಪಿಯವರು ಬೇಕಾದರೆ ಜೆ.ಪಿ. ನಡ್ಡಾ ಅವರ ಅಧ್ಯಕ್ಷತೆಯಲ್ಲಿಯೇ ಪ್ರತಿಭಟನೆ ಮಾಡಲಿ, ಯಾರ ತಕರಾರೂ ಇಲ್ಲ. ಮೂಡಾ ನಿವೇಶನ ಹಂಚಿಕೆ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ವರದಿ ಬಂದ ಮೇಲೆ ಕ್ರಮ ಕೈಗೊಳ್ಳುವುದು ನಿಶ್ಚಿತ.
ಮುಡಾದಿಂದ ಬದಲಿ ನಿವೇಶನ ನೀಡಿರುವುದು ಕಾನೂನುಬದ್ಧವಾಗಿದೆ ಎನ್ನುವುದು ನಮ್ಮ ವಾದ. ಅವರು ಕಾನೂನುಬಾಹಿರವಾಗಿದೆ ಎಂದು ಹೇಳುತ್ತಾರೆ. ಹಾಗಿದ್ದರೆ ದಾಖಲೆ ತೋರಿಸಲಿ ಎಂದು ಪ್ರಶ್ನಿಸಿದರು.ಜಿಲ್ಲಾಧಿಕಾರಿಗಳು 2005 ರಲ್ಲಿ ಭೂ ಪರಿವರ್ತನೆ ಮಾಡಿದ್ದು, ನಿವೇಶನ ಮಾಡುವ ಮುನ್ನ ಜಮೀನು ಕೃಷಿ ಭೂಮಿಯೇ ಆಗಿತ್ತು. ಮಲ್ಲಿಕಾರ್ಜುನ ಸ್ವಾಮಿ ನನ್ನ ಮೈದುನ. 2010 ರಲ್ಲಿ ದಾನಪತ್ರ ಕೊಟ್ಟಿದ್ದಾರೆ. ಇದರಲ್ಲಿ ಅಕ್ರಮವೇನಾಗಿದೆ? ಕೃಷಿ ಭೂಮಿ ಎಂದು ಕೊಟ್ಟಿದ್ದರೂ ಕೂಡ ತಪ್ಪೇನು? ಎಂದು ಪ್ರಶ್ನಿಸಿದರು.