ಮಂಡ್ಯ : ಕಂದಾಯ ಇಲಾಖೆ ಎಲ್ಲ ಇಲಾಖೆಗಳ ಮಾತೃ ಇಲಾಖೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇಲಾಖಾ ನೌಕರರೂ ಮಾತೃ ಹೃದಯದಿಂದ ಜನ ಸೇವೆ ಮಾಡಬೇಕೆಂದು ಮದ್ದೂರು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಹೇಳಿದರು.
ಮದ್ದೂರು ಪಟ್ಟಣದ ತಾಲೂಕು ಆಡಳಿತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕಂದಾಯ ಇಲಾಖೆ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ವಿ.ಎ ಮುರಳೀಧರ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.
ಮದ್ದೂರು ತಾಲೂಕು ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷರಾಗಿದ್ದ ಎಚ್.ಮಂಜುನಾಥ್ ಅವರು ಮಂಡ್ಯ ತಾಲೂಕಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ರಾಜಸ್ವ ನಿರೀಕ್ಷಕ ವಿ.ಎ.ಮುರಳೀಧರ ಅವರನ್ನು ಜಿಲ್ಲಾ ಸಮಿತಿಯಿಂದ ಅವರನ್ನು ನೇಮಕ ಮಾಡಲಾಗಿದೆ.
ವಿ.ಎ.ಮುರಳೀಧರ ಅವರು ದಶಕಗಳ ಮೇಲ್ಪಟ್ಟು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಅವರಿಗೆ ತಾಲೂಕು ಅಧ್ಯಕ್ಷರಾಗಿ ನೇಮಕ ಮಾಡಿದ್ದು ಖುಷಿ ವಿಚಾರ. ನೌಕರರ ಸಹಕಾರ ಇಲ್ಲದೆ ಜನಸೇವೆ ಹಾಗೂ ಉತ್ತಮ ಆಡಳಿತ ನೀಡಲು ಅಸಾಧ್ಯ. ಕಂದಾಯ ಇಲಾಖೆ ಪ್ರತಿದಿನ ಒಂದಲ್ಲಾ ಒಂದು ರೀತಿಯಲ್ಲಿ ಜನರ ಜೊತೆಗೆ ಸಂಪರ್ಕ ಹೊಂದಿರುವ ಇಲಾಖೆಯಾಗಿದ್ದು, ಜನ ಸೇವೆ ಮಾಡಲು ನಿಮಗೆ ಅವಕಾಶ ಸಿಕ್ಕಿದೆ. ಅದನ್ನು ಉತ್ತಮ ರೀತಿಯಲ್ಲಿ ಜನರಿಗೆ ಒಳಿತನ್ನು ಮಾಡುವುದಷ್ಟೆ ನಮ್ಮ ಕೆಲಸವಾಗಲಿ ಎಂದು ಸಲಹೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಂದಾಯ ಇಲಾಖೆ ನೌಕರರ ಸಂಘದ ನೂತನ ಅಧ್ಯಕ್ಷ ವಿ.ಎ.ಮುರಳೀಧರ ಅವರು ಸಾರ್ವಜನಿಕ ಕೆಲಸದಲ್ಲಿ ನಿರತರಾಗಿರುವ ನೌಕರರ ಹಿತಾಸಕ್ತಿ ಕಾಪಾಡುವ ಕಾರ್ಯಕ್ಕೆ ಸದಾ ಬದ್ಧನಾಗಿ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವೆ, ಗ್ರಾಮ ಮಟ್ಟದಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವ ಕಂದಾಯ ಇಲಾಖೆ ನೌಕರರ ಸೇವೆ ಅನನ್ಯವಾಗಿದೆ. ಸರ್ಕಾರದ ಪ್ರತಿಯೊಂದು ಕಾರ್ಯಕ್ರಮ ಮತ್ತು ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ಮುಟ್ಟಿಸುವ ಕಾರ್ಯ ಕಂದಾಯ ಇಲಾಖೆ ನೌಕರರಿಂದ ಆಗುತ್ತಿದೆ. ನೌಕರರ ಸಂಘದ ಬೇಡಿಕೆಗಳಿಗೆ ಸದಾ ಸ್ಪಂದನೆ ನೀಡುವ ಮೂಲಕ ನೌಕರರ ಮೇಲೆ ಯಾವುದೇ ಅನ್ಯಾಯವಾಗದಂತೆ ವಿಶ್ವಾಸಕ್ಕೆ ತೆಗೆದುಕೊಂಡು ಅವರ ಹಿತಾಸಕ್ತಿಗೆ ಬದ್ಧನಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ತಮ್ಮಣ್ಣಗೌಡ, ನೂತನ ಅಧ್ಯಕ್ಷ ವಿ.ಎ.ಮುರಳೀಧರ ಅವರಿಗೆ ನೇಮಕಾತಿ ಆದೇಶ ಪತ್ರ ನೀಡಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಗ್ರೇಡ್ 2 ತಹಶೀಲ್ದಾರ್ ಸೋಮಶೇಖರ್, ಶಿರಸ್ತೇದಾರ್ ಲಕ್ಷ್ಮೀ ನರಸಿಂಹನ್, ಜಿಲ್ಲಾ ಕಾರ್ಯದರ್ಶಿ ಮಹೇಶ್, ಜಂಟಿ ಕಾರ್ಯದರ್ಶಿ ವೆಂಕಟೇಶ್, ಪ್ರಭು, ಸಂಘಟನಾ ಕಾರ್ಯದರ್ಶಿ ಕುಮಾರ್, ರಾಜಸ್ವ ನಿರೀಕ್ಷಕರಾದ ಮೋಹನ್, ಗಿರೀಶ್, ರವೀಂದ್ರ, ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಮಹಾಲಿಂಗಯ್ಯ, ಸಂಘಟನಾ ಕಾರ್ಯದರ್ಶಿ ಕೆ.ಆರ್.ಗೋವಿಂದರಾಜು ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ