ಉತ್ತರಕನ್ನಡ : ಉತ್ತರಕನ್ನಡ ಜಿಲ್ಲೆಯಲ್ಲಿ ಪೆಟ್ರೋಲ್ ಹಾಕಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಕೊಲೆಯ ಶಂಕೆ ವ್ಯಕ್ತವಾಗಿದೆ. ಸುಮಾರು ಅಂದಾಜು 35 ವರ್ಷ ವಯಸ್ಸಿನ ಮಹಿಳೆಯಾಗಿದ್ದು, ತಲೆ ಹಾಗೂ ಬೆನ್ನಿನ ಭಾಗ ಸಂಪೂರ್ಣವಾಗು ಸುಟ್ಟು ಕರಕಲಾಗಿದ್ದು, ಶವ ಪತ್ತೆಯಾಗಿರುವ ಘಟನೆ ಕಾರವಾರ ತಾಲೂಕಿನ ಶಿರವಾಡದಲ್ಲಿ ನಡೆದಿದೆ.
ಇನ್ನು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹದ ಗುರುತನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕಾರವಾರ ತಾಲೂಕಿನ ಶಿರವಾಡ ಗ್ರಾಮದ ಸಂಜನಾ ಗಜಾನನ ತಳೇಕರ ಎಂಬವರ ಮೃತದೇಹವಾಗಿದೆ. ಮೃತ ದೇಹದ ಪಕ್ಕದಲ್ಲಿದ್ದ ಬ್ಯಾಗ್ ತೆರೆದು ನೋಡಿದಾಗ ಅದರಲ್ಲಿದ್ದ ಆಧಾರ ಕಾರ್ಡ್ ಮೂಲಕ ಗುರುತು ಪತ್ತೆ ಮಾಡಲಾಗಿದೆ. ಆಧಾರ್ ಕಾರ್ಡ್ ಮೂಲಕ ಆಕೆಯ ಗಂಡನನ್ನು ಪೊಲೀಸರು ಸಂಪರ್ಕ ಮಾಡಿದ್ದು, ಈಕೆ ನನ್ನ ಹೆಂಡತಿ ಎಂದು ಗಜಾನನ ತಳೇಕರ್ ಗುರುತಿಸಿದ್ದಾನೆ.
ಶಿರವಾಡದ ರೇಲ್ವೆ ನಿಲ್ದಾಣದ ಹಿಂಬದಿಯಲ್ಲಿ ಸುಮಾರು ಅಂದಾಜು 35 ವರ್ಷ ವಯಸ್ಸಿನ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ತಲೆ ಹಾಗೂ ಬೆನ್ನಿನ ಭಾಗ ಸುಟ್ಟು ಕರಕಲಾಗಿವೆ. ಪ್ಯಾಂಟ್ ಧರಿಸಿರುವ ಮಹಿಳೆಯ ಸೊಂಟದ ಮೇಲ್ಬಾಗದಲ್ಲಿ ಯಾವುದೇ ಬಟ್ಟೆ ಇಲ್ಲ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ಮಾಡಿದ್ದಾರೆ. ಸ್ಥಳಕ್ಕೆ ಶ್ವಾನದಳವನ್ನೂ ಕರೆತಂದಿದ್ದು, ಆರೋಪಿಗಳ ಪತ್ತೆ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ.