ಉತ್ತರಕನ್ನಡ : ಯಾವುದೇ ಕೆಲಸ ಮಾಡುವಾಗಲು ಅತ್ಯಂತ ಜಾಗರುಕರಾಗಿರಬೇಕು. ಇಲ್ಲವಾದರೆ ನಮ್ಮ ಪ್ರಾಣಕ್ಕೆ ಸಂಕಷ್ಟ ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತೆ. ಇದೀಗ ಅಡಿಕೆ ಸುಲಿಯುವ ಯಂತ್ರಕ್ಕೆ ಸೀರೆಯ ಸೆರಗು ಸಿಲುಕಿ, ಯಂತ್ರದೊಳಗೆ ಹೋದ ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶೋಭಾ ಹೆಗಡೆ ದಾರುಣವಾಗಿ ಸಾವಿಗೀಡಾಗಿದ್ದಾರೆ.
ಹೌದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೊಸಬಾಳೆ ನಿವಾಸಿ ಶೋಭಾ ಹೆಗಡೆ ಅವರು ಕಳೆದ ಬುಧವಾರ ಮೃತರಾಗಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಜಿ.ಪಂ. ಮಾಜಿ ಸದಸ್ಯ, ಪ್ರಗತಿಪರ ಕೃಷಿಕ ವೆಂಕಟೇಶ ಹೆಗಡೆ ಹೊಸಬಾಳೆ ಅವರ ಧರ್ಮ ಪತ್ನಿಯಾಗಿದ್ದ ಶೋಭಾ ಹೆಗಡೆ ಅವರು ಕೃಷಿ ಕಾರ್ಯದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ಮನೆಯಲ್ಲಿ ಅಡಿಕೆ ಸುಲಿಯುವ ಕೆಲಸ ನಡೆಯುತ್ತಿತ್ತು.
ಶೋಭಾ ಹೆಗಡೆ ಅವರು ಕೆಲಸಗಾರರು ಕೆಲಸದ ಮೇಲ್ವಿಚಾರಣೆ ನೋಡಿಕೊಳ್ಳಲು ಹೋಗಿದ್ದರು. ಈ ವೇಳೆ ಚಾಲಿ ಸುಲಿಯುವ ಯಂತ್ರಕ್ಕೆ ಆಕಸ್ಮಿಕವಾಗಿ ಸೀರೆಯ ಸೆರಗು ಸಿಲುಕಿದ್ದು, ಯಂತ್ರ ತನ್ನತ್ತ ಸೆಳೆದು ಬಿಸಾಕಿದ ಪರಿಣಾಮ ಶೋಭಾ ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಕೆಲಸಗಾರರು ಅಲ್ಲಿಯೇ ಇದ್ದರೂ ಕ್ಷಣಾರ್ಧದಲ್ಲಿ ಘಟನೆ ಸಂಭವಿಸಿದೆ.ಈ ಘಟನೆ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.