ಉತ್ತರಕನ್ನಡ : ಪಾಗಲ್ ಪ್ರೇಮಿ ಒಬ್ಬ ಪ್ರೀತ್ಸೆ ಎಂದು ಯುವತಿಯ ಹಿಂದೆ ಬಿದ್ದಿದ್ದಾನೆ ಇದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ಮೃತ ಯುವತಿಯನ್ನು ರಿಶೆಲ್ ಎಂದು ಗುರುತಿಸಲಾಗಿದೆ.
ಯುವಕನ ಕಾಟ ತಾಳಲಾರದೆ ತಮ್ಮ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿ ಯುವತಿಯ ತಂದೆ ಕದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಬಾಡ ನಂದನಗದ್ದಾದ ಶರಾಗ್ ಚಂದ್ರಾಹಾಸ ಕೊಡಾರಕರ್ ಎಂಬಾತನೇ ತನ್ನ ಮಗಳಿಗೆ ಕಾಟ ಕೊಟ್ಟಿದ್ದಾನೆ ಎಂದು ಮೃತ ಯುವತಿಯ ತಂದೆ ಕಿಸ್ತೋದ್ ಪ್ರಾನ್ಸಿಸ್ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಆರೋಪಿಯ ಪ್ರೇಮ ನಿವೇದನೆಯನ್ನು ಯುವತಿ ನಿರಾಕರಿಸಿದಾಗ, ಆತ ಆಕೆಯನ್ನು ಟಾರ್ಗೆಟ್ ಮಾಡಿ ಅತ್ಯಂತ ಕ್ರೂರವಾಗಿ ಮಾತನಾಡುತ್ತಿದ್ದನು. ನೀನು ಬದುಕಿದ್ದು ಪ್ರಯೋಜನವಿಲ್ಲ, ಸತ್ತು ಹೋಗು. ನೀನು ಬದುಕಿರುವುದಕ್ಕಿಂತ ಸತ್ತರೆ ಒಳ್ಳೆಯದು ಎಂದು ಹೀಯಾಳಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದ್ದನು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದರಿಂದ ಮನನೊಂದು ಜನವರಿ 09, 2026 ರಂದು ಮಧ್ಯಾಹ್ನ ಸುಮಾರು 2:30 ಗಂಟೆಗೆ ತನ್ನ ಮನೆಯ ಬೆಡ್‌ರೂಮ್‌ನಲ್ಲಿ ನೇಣು ಬಿಗಿದುಕೊಂಡು ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಯುವತಿ ತಂದೆ ದೂರಿದ್ದಾರೆ.ಕದ್ರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.








