“ತಮ್ಮ ಹಸ್ತಕ್ಷೇಪವಿಲ್ಲದಿದ್ದರೆ ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನ ಪ್ರಧಾನಿ ಕೊಲ್ಲಲ್ಪಡುತ್ತಿದ್ದರು” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
2026ರ ‘ಸ್ಟೇಟ್ ಆಫ್ ದಿ ಯೂನಿಯನ್’ ಉದ್ದೇಶಿಸಿ ಮಾತನಾಡಿದ ಟ್ರಂಪ್, “ನನ್ನ ಆಡಳಿತದ ಮೊದಲ 10 ತಿಂಗಳುಗಳಲ್ಲಿ ನಾನು ಎಂಟು ಯುದ್ಧಗಳನ್ನು ಕೊನೆಗೊಳಿಸಿದೆ. ಕಳೆದ ವರ್ಷದ ಮೇ ತಿಂಗಳಲ್ಲಿ ನಡೆದ ‘ಆಪರೇಷನ್ ಸಿಂಧೂರ್’ ಸಂದರ್ಭದಲ್ಲಿ ನಾನು ಹಸ್ತಕ್ಷೇಪ ಮಾಡದಿದ್ದರೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಕೊಲ್ಲಲ್ಪಡುತ್ತಿದ್ದರು” ಎಂದು ಪ್ರತಿಪಾದಿಸಿದ್ದಾರೆ.
”ನನ್ನ ಹಸ್ತಕ್ಷೇಪ ಇಲ್ಲದಿದ್ದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಪರಮಾಣು ಯುದ್ಧವೇ ಸಂಭವಿಸುತ್ತಿತ್ತು. ನಾನು ಮಧ್ಯಪ್ರವೇಶಿಸದಿದ್ದರೆ ಸುಮಾರು 3.5 ಕೋಟಿ ಜನರು ಸಾವನ್ನಪ್ಪುತ್ತಿದ್ದರು ಎಂದು ಪಾಕಿಸ್ತಾನದ ಪ್ರಧಾನಿಯೇ ನನಗೆ ತಿಳಿಸಿದ್ದಾರೆ.”
ಕಳೆದ ವರ್ಷ ನಡೆದ ‘ಆಪರೇಷನ್ ಸಿಂಧೂರ್’ (ಮೇ 7-10) ಸಮಯದಲ್ಲಿ ಯಾವುದೇ ಪರಮಾಣು ದಾಳಿಯ ಭೀತಿ ಇರಲಿಲ್ಲ ಎಂದು ಭಾರತವು ನಿರಂತರವಾಗಿ ಇಂತಹ ಹೇಳಿಕೆಗಳನ್ನು ನಿರಾಕರಿಸುತ್ತಾ ಬಂದಿದೆ.
ಕಳೆದ ತಿಂಗಳು ದಾವೋಸ್ ಶೃಂಗಸಭೆಯಲ್ಲಿ ಭಾರತೀಯ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಂತರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ (IAEA) ಮುಖ್ಯಸ್ಥ ರಾಫೆಲ್ ಮರಿಯಾನೊ ಗ್ರೊಸ್ಸಿ ಕೂಡ ಇದನ್ನೇ ಪುಷ್ಟೀಕರಿಸಿದ್ದಾರೆ. ಅವರು, “ಈ ಸಂಘರ್ಷದಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಬಗ್ಗೆ ಯಾವುದೇ ಲಕ್ಷಣಗಳಿರಲಿಲ್ಲ. ಇದು ಸಂಪೂರ್ಣವಾಗಿ ಸಾಂಪ್ರದಾಯಿಕ ಮಾದರಿಯ (Conventional nature) ಸಂಘರ್ಷವಾಗಿತ್ತು” ಎಂದು ಹೇಳಿದ್ದಾರೆ.
ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ತಾವು ಮಧ್ಯಪ್ರವೇಶಿಸಿರುವುದಾಗಿ ಟ್ರಂಪ್ ಮಾಡಿರುವ ಈ ಪ್ರತಿಪಾದನೆಯು, ಅವರು “ಯುದ್ಧದ ಸಮಯದಲ್ಲಿ 11 ಅತ್ಯಂತ ದುಬಾರಿ ಯುದ್ಧವಿಮಾನಗಳನ್ನು ಹೊಡೆದುರುಳಿಸಲಾಗಿತ್ತು” ಎಂದು ಹೇಳಿದ ಕೆಲವೇ ದಿನಗಳಲ್ಲಿ ಹೊರಬಿದ್ದಿದೆ. ಎರಡು ದೇಶಗಳ ನಡುವೆ ತಾವು ಶಾಂತಿ ಸಂಧಾನಕಾರನ ಪಾತ್ರ ವಹಿಸಿದ್ದಾಗಿ ಟ್ರಂಪ್ ಪದೇ ಪದೇ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಭಾರತವು ಇದನ್ನು ಕಟ್ಟುನಿಟ್ಟಾಗಿ ನಿರಾಕರಿಸಿದ್ದು, ಉಭಯ ದೇಶಗಳ ಸೇನಾ ಕಾರ್ಯಾಚರಣೆಯ ಮಹಾನಿರ್ದೇಶಕರ (DGMO) ಮಟ್ಟದ ದ್ವಿಪಕ್ಷೀಯ ಮಾತುಕತೆಯ ನಂತರವೇ ಸಂಘರ್ಷ ಶಮನಗೊಂಡಿದೆ ಎಂದು ಸ್ಪಷ್ಟಪಡಿಸಿದೆ.
ಕಳೆದ ವಾರ ‘ಬೋರ್ಡ್ ಆಫ್ ಪೀಸ್’ ಸಭೆಯಲ್ಲಿ ಮಾತನಾಡಿದ್ದ ಟ್ರಂಪ್, “ನಾನು ಎರಡೂ ದೇಶಗಳ ಮೇಲೆ ಶೇಕಡಾ 200 ರಷ್ಟು ಸುಂಕ (Tariff) ವಿಧಿಸುವುದಾಗಿ ಬೆದರಿಕೆ ಹಾಕಿದ್ದೆ. ಆಗ ಎರಡೂ ರಾಷ್ಟ್ರಗಳು ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸಿದವು. ಯಾಕೆಂದರೆ ಹಣಕ್ಕಿಂತ ದೊಡ್ಡದು ಯಾವುದೂ ಇಲ್ಲ” ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿದ್ದ ತಾನು, ನವದೆಹಲಿಯೊಂದಿಗೆ ಯಾವುದೇ ವ್ಯಾಪಾರ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾಗಿ ಅವರು ಹೇಳಿಕೊಂಡಿದ್ದರು.








