ವಾಷಿಂಗ್ಟನ್:ರಷ್ಯಾ ಮತ್ತು ಇರಾನ್‌ನಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸಲು ನೀಡಲಾಗಿದ್ದ ವಿಶೇಷ ಅನುಮತಿಯನ್ನು (Waiver) ವಿಸ್ತರಿಸುವುದಿಲ್ಲ ಎಂದು ಅಮೆರಿಕದ ಶ್ವೇತಭವನ ಸ್ಪಷ್ಟಪಡಿಸಿದೆ. ಅಮೆರಿಕದ ಈ ಕಟ್ಟುನಿಟ್ಟಿನ ನಿರ್ಧಾರದಿಂದಾಗಿ ಭಾರತ ಸೇರಿದಂತೆ ಹಲವು ಪ್ರಮುಖ ತೈಲ ಆಮದು ರಾಷ್ಟ್ರಗಳಿಗೆ ಈಗ ಇಂಧನ ಭದ್ರತೆಯ ಸವಾಲು ಎದುರಾಗಿದೆ.
ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ಬುಧವಾರ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, “ರಷ್ಯಾ ಮತ್ತು ಇರಾನ್ ತೈಲದ ಮೇಲಿನ ಸಾಮಾನ್ಯ ಪರವಾನಗಿಯನ್ನು ನಾವು ನವೀಕರಿಸುತ್ತಿಲ್ಲ” ಎಂದು ತಿಳಿಸಿದ್ದಾರೆ.
ರಷ್ಯಾ ತೈಲದ ಮೇಲಿನ 30 ದಿನಗಳ ಸಡಿಲಿಕೆಯು ಏಪ್ರಿಲ್ 11ಕ್ಕೆ ಕೊನೆಗೊಂಡಿದೆ. ಇನ್ನು ಇರಾನ್ ತೈಲದ ಮೇಲಿನ ವಿನಾಯಿತಿಯು ಇದೇ ಭಾನುವಾರ (ಏಪ್ರಿಲ್ 19) ಅಂತ್ಯಗೊಳ್ಳಲಿದೆ.
ಕಳೆದ ಕೆಲವು ತಿಂಗಳುಗಳಿಂದ ರಷ್ಯಾದಿಂದ ಅಗ್ಗದ ದರದಲ್ಲಿ ಹೆಚ್ಚಿನ ತೈಲ ಖರೀದಿಸುತ್ತಿದ್ದ ಭಾರತಕ್ಕೆ ಈ ನಿರ್ಧಾರ ದೊಡ್ಡ ಹೊಡೆತ ನೀಡಲಿದೆ. ಮಾರ್ಚ್ ತಿಂಗಳೊಂದರಲ್ಲೇ ಭಾರತ ಸುಮಾರು 5.3 ಬಿಲಿಯನ್ ಯುರೋ ಮೌಲ್ಯದ ರಷ್ಯಾ ತೈಲವನ್ನು ಆಮದು ಮಾಡಿಕೊಂಡಿತ್ತು.
ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಇಂಧನ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯನ್ನು ತಡೆಯಲು ಮಾರ್ಚ್‌ನಲ್ಲಿ ಅಮೆರಿಕ ತಾತ್ಕಾಲಿಕ ರಿಯಾಯಿತಿ ನೀಡಿತ್ತು. ಆದರೆ, ಈಗ ಈ ದೇಶಗಳ ಮೇಲಿನ ಹಣಕಾಸಿನ ಒತ್ತಡವನ್ನು ಹೆಚ್ಚಿಸಲು ಅಮೆರಿಕ ಈ ರಿಯಾಯಿತಿಯನ್ನು ರದ್ದುಗೊಳಿಸಿದೆ.ಒಂದು ವೇಳೆ ರಷ್ಯಾ ಮತ್ತು ಇರಾನ್‌ನಿಂದ ತೈಲ ಪೂರೈಕೆ ಸ್ಥಗಿತಗೊಂಡರೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಇದು ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲೆ ನೇರ ಪರಿಣಾಮ ಬೀರಬಹುದು.








