ವಾಷಿಂಗ್ಟನ್: ಪೂರ್ವ ಪೆಸಿಫಿಕ್ ಸಾಗರದಲ್ಲಿ ಮಾದಕ ದ್ರವ್ಯ ಸಾಗಿಸುತ್ತಿದ್ದ ಹಡಗುಗಳೆಂದು ಶಂಕಿಸಿ ಅಮೆರಿಕ ನೌಕಾಪಡೆ ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ ಐವರು ಸಾವನ್ನಪ್ಪಿದ್ದಾರೆ. ಈ ಕಾರ್ಯಾಚರಣೆಯ ವೀಡಿಯೊವನ್ನು ಅಮೆರಿಕದ ಸದರ್ನ್ ಕಮಾಂಡ್ (SOUTHCOM) ಬಿಡುಗಡೆ ಮಾಡಿದ್ದರೂ, ಆ ಹಡಗುಗಳಲ್ಲಿ ಮಾದಕ ವಸ್ತುಗಳಿದ್ದವು ಎಂಬುದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳನ್ನು ನೀಡಿಲ್ಲ.
ಏಪ್ರಿಲ್ 11 ರಂದು ಪೂರ್ವ ಪೆಸಿಫಿಕ್ ಸಾಗರದ ಪ್ರಮುಖ ಸಾರಿಗೆ ಮಾರ್ಗಗಳಲ್ಲಿ ಈ ದಾಳಿ ನಡೆದಿದೆ. ದಾಳಿಯಲ್ಲಿ ಒಟ್ಟು ಐವರು ಮೃತಪಟ್ಟಿದ್ದು, ಓರ್ವ ವ್ಯಕ್ತಿ ಮಾತ್ರ ಬದುಕುಳಿದಿದ್ದಾನೆ ಎಂದು ವರದಿಯಾಗಿದೆ. ಅಮೆರಿಕ ಸೇನೆಯು ಇವರನ್ನು ‘ನಾರ್ಕೋ-ಟೆರರಿಸ್ಟ್’ (ಮಾದಕ ಭಯೋತ್ಪಾದಕರು) ಎಂದು ಕರೆದಿದೆ.
ಸೆಪ್ಟೆಂಬರ್ನಿಂದ ಆರಂಭವಾದ ಈ ವಿವಾದಾತ್ಮಕ ‘ಆಪರೇಷನ್ ಸದರ್ನ್ ಸ್ಪಿಯರ್’ ಕಾರ್ಯಾಚರಣೆಯಲ್ಲಿ ಇದುವರೆಗೆ ಬಲಿಯಾದವರ ಸಂಖ್ಯೆ 168ಕ್ಕೆ ಏರಿಕೆಯಾಗಿದೆ.
ಪ್ರತಿ ಬಾರಿಯಂತೆ ಈ ಬಾರಿಯೂ ಅಮೆರಿಕ ಸೇನೆಯು ದಾಳಿಯ ವೈಮಾನಿಕ ವೀಡಿಯೊವನ್ನು ಹಂಚಿಕೊಂಡಿದೆ. ಆದರೆ, ಆ ಹಡಗುಗಳಲ್ಲಿ ಡ್ರಗ್ಸ್ ಇತ್ತು ಎನ್ನುವುದಕ್ಕೆ ಯಾವುದೇ ಪೋಟೋ ಅಥವಾ ಸಾಕ್ಷ್ಯಗಳನ್ನು ಸಾರ್ವಜನಿಕವಾಗಿ ನೀಡಿಲ್ಲ.
ಈ ದಾಳಿಗಳನ್ನು ಅಂತರಾಷ್ಟ್ರೀಯ ಸಂಘಟನೆಗಳು ‘ನ್ಯಾಯಬಾಹಿರ ಹತ್ಯೆಗಳು’ ಎಂದು ಖಂಡಿಸಿವೆ. “ಇವರು ಕೇವಲ ಮೀನುಗಾರರಾಗಿರಬಹುದು” ಎಂದು ಮೃತಪಟ್ಟವರ ಕುಟುಂಬಸ್ಥರು ಮತ್ತು ಸಾಮಾಜಿಕ ಕಾರ್ಯಕರ್ತರು ಈ ಹಿಂದಿನ ಘಟನೆಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.ಮಾದಕ ದ್ರವ್ಯ ಮಾಫಿಯಾದ ವಿರುದ್ಧ ಅಮೆರಿಕ “ಸಶಸ್ತ್ರ ಸಂಘರ್ಷ” (Armed Conflict) ನಡೆಸುತ್ತಿದೆ ಎಂದು ಟ್ರಂಪ್ ಸರ್ಕಾರ ಪ್ರತಿಪಾದಿಸಿದೆ. ಅಕ್ರಮ ಮಾದಕ ದ್ರವ್ಯಗಳು ಅಮೆರಿಕ ಪ್ರವೇಶಿಸುವುದನ್ನು ತಡೆಯಲು ಇಂತಹ ಕಠಿಣ ಕ್ರಮ ಅಗತ್ಯ ಎಂದು ಬೆಂಬಲಿಗರು ವಾದಿಸುತ್ತಿದ್ದಾರೆ.








