ನವದೆಹಲಿ: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಉಂಟಾಗಬಹುದಾಗಿದ್ದ ದೊಡ್ಡ ಬಿಕ್ಕಟ್ಟಿಗೆ ಅಮೆರಿಕ ಸದ್ಯಕ್ಕೆ ಬ್ರೇಕ್ ಹಾಕಿದೆ. ರಷ್ಯಾದ ಕಚ್ಚಾ ತೈಲದ (Russian Oil) ಮೇಲಿನ ನಿರ್ಬಂಧಗಳಿಗೆ ನೀಡಲಾಗಿದ್ದ ವಿನಾಯಿತಿಯನ್ನು (Waiver) ಅಮೆರಿಕ ಸರ್ಕಾರವು ಅಧಿಕೃತವಾಗಿ ಮತ್ತೊಂದು ತಿಂಗಳ ಕಾಲ ವಿಸ್ತರಿಸಿದೆ. ಅಮೆರಿಕದ ಈ ಮಹತ್ವದ ನಿರ್ಧಾರದಿಂದಾಗಿ ರಷ್ಯಾದಿಂದ ಭಾರೀ ಪ್ರಮಾಣದಲ್ಲಿ ರಿಯಾಯಿತಿ ದರದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತ ಸೇರಿದಂತೆ ವಿಶ್ವದ ಪ್ರಮುಖ ಖರೀದಿದಾರ ರಾಷ್ಟ್ರಗಳಿಗೆ ದೊಡ್ಡ ನಿರಾಳತೆ ಸಿಕ್ಕಂತಾಗಿದೆ.
ಇತ್ತೀಚೆಗಷ್ಟೇ ಇಂಧನ ದರ ಏರಿಕೆಯಿಂದ ತತ್ತರಿಸಿದ್ದ ಮಾರುಕಟ್ಟೆಗೆ ಇದು ಅತ್ಯಂತ ಸಮಾಧಾನಕರ ಸುದ್ದಿಯಾಗಿದೆ.ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದ ಮೇಲೆ ಅಮೆರಿಕ ಭಾರೀ ನಿರ್ಬಂಧಗಳನ್ನು ಹೇರಿದ್ದರೂ, ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ತಡೆಯಲು ಈ ತಾತ್ಕಾಲಿಕ ವಿನಾಯಿತಿ ನೀಡಲಾಗುತ್ತಿತ್ತು. ಈಗ ಇದನ್ನು ಮತ್ತೊಂದು ತಿಂಗಳು ವಿಸ್ತರಿಸಿರುವುದರಿಂದ ಭಾರತಕ್ಕೆ ಯಾವುದೇ ಅಡೆತಡೆಯಿಲ್ಲದೆ ರಷ್ಯಾದಿಂದ ಅಗ್ಗದ ದರದಲ್ಲಿ ಕಚ್ಚಾ ತೈಲದ ಆಮದು ಮುಂದುವರಿಯಲಿದೆ.
ಒಂದು ವೇಳೆ ಅಮೆರಿಕ ಈ ವಿನಾಯಿತಿಯನ್ನು ರದ್ದುಗೊಳಿಸಿದ್ದರೆ, ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಕೊರತೆಯುಂಟಾಗಿ ಪೆಟ್ರೋಲ್, ಡೀಸೆಲ್ ದರಗಳು ಮತ್ತಷ್ಟು ಗಗನಕ್ಕೇರುತ್ತಿದ್ದವು. ಆದರೆ ಯುಎಸ್ ನಿರ್ಧಾರದಿಂದಾಗಿ ತೈಲ ಮಾರುಕಟ್ಟೆ ಸದ್ಯಕ್ಕೆ ಸ್ಥಿರವಾಗಿರಲಿದೆ.








