ವಾಷಿಂಗ್ಟನ್: ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಗನಕ್ಕೇರುತ್ತಿರುವುದನ್ನು ನಿಯಂತ್ರಿಸಲು ಅಮೆರಿಕ ಸರ್ಕಾರವು ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ರಷ್ಯಾದ ತೈಲ ಮಾರಾಟದ ಮೇಲೆ ಹೇರಲಾಗಿದ್ದ ಕಠಿಣ ನಿರ್ಬಂಧಗಳಿಂದ ನೀಡಲಾಗಿದ್ದ ವಿನಾಯಿತಿಯನ್ನು (Waiver) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಮತ್ತಷ್ಟು ಅವಧಿಗೆ ವಿಸ್ತರಿಸಿದೆ.
ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಭೀತಿಯಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದೆ. ರಷ್ಯಾದ ತೈಲವನ್ನು ಸಂಪೂರ್ಣವಾಗಿ ನಿಷೇಧಿಸಿದರೆ ಬೆಲೆಗಳು ಮತ್ತಷ್ಟು ಹೆಚ್ಚಾಗಿ ಜಾಗತಿಕ ಆರ್ಥಿಕತೆಗೆ ಹೊಡೆತ ಬೀಳುವ ಆತಂಕ ಅಮೆರಿಕಕ್ಕಿದೆ.
ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಮತ್ತು ಅಮೆರಿಕದ ಒಳಗೂ ಪೆಟ್ರೋಲ್ ಬೆಲೆ ಏರಿಕೆಯಾಗದಂತೆ ತಡೆಯಲು ಈ ವಿನಾಯಿತಿ ಅನಿವಾರ್ಯವಾಗಿದೆ.ಅಮೆರಿಕದ ಈ ನಿರ್ಧಾರದಿಂದಾಗಿ ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುತ್ತಿರುವ ಭಾರತ ಮತ್ತು ಚೀನಾದಂತಹ ದೇಶಗಳಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಂತಾಗಿದೆ.








