ಟೆಹ್ರಾನ್:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ನೀಡಿದ್ದ ‘ಪರಮಾಣು ಒಪ್ಪಂದ ಮತ್ತು ಸಂಧಾನ’ದ ಹೇಳಿಕೆಯನ್ನು ಇರಾನ್ ಕಟುವಾಗಿ ಟೀಕಿಸಿದೆ. ಅಮೆರಿಕ ಮತ್ತು ಇಸ್ರೇಲ್ ದೇಶಗಳು ಈಗ ತಾವೇ ಹೆಣೆದ ಬಲೆಯಲ್ಲಿ ಸಿಲುಕಿಕೊಂಡಿವೆ ಎಂದು ಲೇವಡಿ ಮಾಡಿರುವ ಇರಾನ್, ತನ್ನ ಮೇಲೆ ದಾಳಿ ನಡೆದರೆ “ಭೀಕರ ಶಿಕ್ಷೆ” (Crushing Punishment) ನೀಡುವುದಾಗಿ ಗುಡುಗಿದೆ.
ಇರಾನ್ ಪರಮಾಣು ಅಸ್ತ್ರ ಹೊಂದದಿರಲು ಒಪ್ಪಿಕೊಂಡಿದೆ ಎಂಬ ಟ್ರಂಪ್ ಅವರ ಹೇಳಿಕೆಯನ್ನು ಇರಾನ್ ವಿದೇಶಾಂಗ ಸಚಿವಾಲಯವು “ಸಂಪೂರ್ಣ ಸುಳ್ಳು ಮತ್ತು ಹಾದಿ ತಪ್ಪಿಸುವ ತಂತ್ರ” ಎಂದು ಕರೆದಿದೆ.
ಸಂಧಾನಕ್ಕೆ ನಕಾರ: ಪ್ರಸ್ತುತ ಸನ್ನಿವೇಶದಲ್ಲಿ ಅಮೆರಿಕದೊಂದಿಗೆ ಯಾವುದೇ ರೀತಿಯ ಮಾತುಕತೆ ಅಥವಾ ಸಂಧಾನ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ.
ಇಸ್ರೇಲ್ ಮತ್ತು ಅಮೆರಿಕದ ಜಂಟಿ ನೀತಿಗಳಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಅಸ್ಥಿರತೆಗೆ ತಕ್ಕ ಉತ್ತರ ನೀಡಲಾಗುವುದು. ನಮ್ಮ ಸಾರ್ವಭೌಮತ್ವಕ್ಕೆ ಧಕ್ಕೆಯಾದರೆ ಶತ್ರು ರಾಷ್ಟ್ರಗಳು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ತಿರುಗೇಟು ನೀಡಲಾಗುವುದು ಎಂದು ಇರಾನ್ ಎಚ್ಚರಿಸಿದೆ.
ಇತ್ತೀಚಿನ ದಿನಗಳಲ್ಲಿ ಇರಾನ್‌ನ ಪ್ರಮುಖ ಸೇನಾ ನೆಲೆಗಳು ಮತ್ತು ಆಯಕಟ್ಟಿನ ಪ್ರದೇಶಗಳ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಗಳು ಇರಾನ್ ಅನ್ನು ಕೆರಳಿಸಿವೆ. ಇದಕ್ಕೆ ಅಮೆರಿಕ ಬೆಂಬಲ ನೀಡುತ್ತಿದೆ ಎಂಬುದು ಇರಾನ್‌ನ ಪ್ರಬಲ ಆರೋಪವಾಗಿದೆ. ಇದೇ ಕಾರಣಕ್ಕೆ ಟ್ರಂಪ್ ಅವರ ಸಂಧಾನದ ಪ್ರಸ್ತಾಪವನ್ನು ಇರಾನ್ ನಂಬಲು ತಯಾರಿಲ್ಲ.








