ಬೆಂಗಳೂರು : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಕೋಲಾರ ಜಿಲ್ಲೆಯ ಸರ್ಕಾರಿ ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಚಿತ್ರೀಕರಿಸಿದ ಆರೋಪದಲ್ಲಿ ಶಾಲೆಯ ಚಿತ್ರಕಲೆ ಶಿಕ್ಷಕನ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಈ ಕುರಿತಂತೆ ಶಿಕ್ಷಕ ತನ್ನ ಮೇಲೆ ದಾಖಲಾದ ಪ್ರಕರಣವನ್ನು ರದ್ದುಗೊಳಿಸಿ ಎಂದು ಅರ್ಜಿ ಸಲ್ಲಿಸಿದ್ದ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ. ಅಲ್ಲದೆ, ಪೋಕ್ಸೋ ಕಾಯ್ದೆಯ ಸೆಕ್ಷನ್ 11ರ ಪ್ರಕಾರ ಮಕ್ಕಳ ದೇಹ ಅಥವಾ ದೇಹದ ಯಾವುದೇ ಭಾಗವನ್ನು ಅಸಭ್ಯ ರೀತಿಯಲ್ಲಿ ತೋರಿಸುವುದು ಲೈಂಗಿಕ ಕಿರುಕುಳವಾಗುತ್ತದೆ. ಈ ಕೃತ್ಯವು ಪೋಕ್ಸೋ ಕಾಯ್ದೆಯ ಸೆಕ್ಷನ್ 12ರ ಅಡಿ ಶಿಕ್ಷಾರ್ಹವಾಗಿದೆ.
ಮೊಬೈಲ್‌ನ ಮೆಮೋರಿ ಕಾರ್ಡ್‌ನಲ್ಲಿರುವ ಚಿತ್ರಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಅವು ಅರ್ಜಿದಾರನ ಮೇಲಿನ ಆರೋಪಗಳನ್ನು ದೃಢಪಡಿಸುತ್ತವೆ. ಈ ಕೃತ್ಯ ಪೋಕ್ಸೋ ಕಾಯ್ದೆಯ ಸೆಕ್ಷನ್ 12ರ ಅಡಿ ಅಪರಾಧವಾಗಿದೆ. ಪ್ರಕರಣ ಸಂಬಂಧ ದೋಷಾರೋಪ ಪಟ್ಟಿ ಸಿದ್ಧವಾಗಿದ್ದು, ಯಾವುದೇ ಸಂದರ್ಭದಲ್ಲೂ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಕೆಯಾಗಬಹುದು. ಆದ್ದರಿಂದ, ಅರ್ಜಿದಾರನ ವಿರುದ್ಧದ ಪ್ರಕರಣ ರದ್ದುಪಡಿಸಬಾರದು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.
ಒಬ್ಬ ಶಿಕ್ಷಕನಾಗಿ ಈ ರೀತಿಯ ವಿಡಿಯೋ ಚಿತ್ರೀಕರಿಸುವುದು ನಿಜಕ್ಕೂ ಅಸಭ್ಯತನ. ಇಂತಹ ಕೃತ್ಯಗಳು ಕ್ಷಮಾರ್ಹವಲ್ಲ. ಅರ್ಜಿದಾರ ಪೂರ್ಣಪ್ರಮಾಣದ ವಿಚಾರಣೆ ಎದುರಿಸಿ ಆರೋಪಮುಕ್ತನಾಗಿ ಬರಬಹುದು. ಪ್ರಕರಣ ವಿಚಾರಣೆ ಹಂತದಲ್ಲಿದ್ದು, ಅದನ್ನು ರದ್ದುಪಡಿಸಿದರೆ ಶಿಕ್ಷಕನ ಅಕ್ರಮ ಚುಟವಟಿಕೆಯನ್ನು ಉತ್ತೇಜಿಸಿದಂತಾಗುತ್ತದೆ ಎಂದು ತಿಳಿಸಿರುವ ಪೀಠ, ಆರೋಪಿಯ ಅರ್ಜಿ ವಜಾಗೊಳಿಸಿ ಆದೇಶಿಸಿದೆ.