ಬೆಂಗಳೂರು : ಬೆಂಗಳೂರಿನಲ್ಲಿ ಪದವಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಮೊದಲು ಆಟೋದಲ್ಲಿ ಕರೆದೊಯ್ದು ಅತ್ಯಾಚಾರ ಮಾಡಲಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಬೈಕ್‌ನಲ್ಲಿ ಡ್ರಾಪ್ ಕೊಡುವುದಾಗಿ ಕರೆದೊಯ್ದ ವ್ಯಕ್ತಿಯೇ ಯುವತಿಯನ್ನು ನಿರ್ಜನ ಪ್ರದೇಶದ ಶೆಡ್‌ಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಪ್ರಕರಣದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಅವರು, ಈ ಘಟನೆ ನಿನ್ನೆ ರಾತ್ರಿ ಸುಮಾರು 1 ಗಂಟೆ ಸುಮಾರಿಗೆ ನಡೆದಿದೆ. ರಾತ್ರಿ ವೇಳೆ ವಾಪಸ್ ರೂಮಿಗೆ ಹೋಗುವಾಗ ಯುವತಿ ಸ್ನೇಹಿತನ ಕಾರನ್ನ ತಾನೇ ಓಡಿಸೋದಾಗಿ ಹೇಳಿ ಕಾರು ಚಾಲನೆ ಮಾಡಿದ್ದಾಳೆ. ಆದರೆ, ಕಾರನ್ನು ಸರಿಯಾಗಿ ಓಡಿಸಲು ಬರದೇ ಮೂರು ಆಟೋಗಳಿಗೆ ಟಚ್ ಮಾಡಿದ್ದಾಳೆ. ಆಟೋ ಚಾಲಕರು ಯುವತಿ ಮೇಲೆ ಗಲಾಟೆ ಮಾಡಲು ಮುಂದಾಗುದ್ದಾರೆ. ಆಗ ಯುವತಿ ಭಯದಿಂದ ಪೊಲೀಸರ ಸಹಾಯವಾಣಿ 112ಗೆ ಕರೆ ಮಾಡಿದ್ದಾಳೆ ಎಂದು ತಿಳಿಸಿದರು.
ಈ ವೇಳೆ ಪೊಲೀಸರು ಸ್ಥಳಕ್ಕೆ ಬಂದು ನನ್ನನ್ನು ವಶಕ್ಕೆ ಪಡೆಯಬಹುದು ಎಂದು ಭಯದಿಂದ ತನ್ನ ರೂಮಿಗೆ ಹೋಗಲು ತಡರಾತ್ರಿ ವೇಳೆ ಅಪರಿಚಿತ ಬೈಕ್ ಸವಾರರಿಗೆ ಅಡ್ಡ ಹಾಕಿ ಡ್ರಾಪ್ ಕೇಳಿದ್ದಾಳೆ. ಬೈಕ್‌ನಲ್ಲಿ ಯುವತಿ ಕುಳಿತ ನಂತರ ತನ್ನ ಮೊಬೈಲ್‌ನಲ್ಲಿದ್ದ ಅಲರ್ಟ್ ಆಪ್ ಆನ್ ಮಾಡಿ ತನ್ನ ಸ್ನೇಹಿತೆ ಹಾಗೂ ಅಪ್ಪನಿಗೆ ತುರ್ತು ಸಹಾಯದ ಕುರಿತ ಸಂದೇಶ ಹೋಗುವಂತೆ ಲೊಕೇಷನ್ ಆನ್ ಮಾಡಿದ್ದಾಳೆ.
ಅಷ್ಟೊತ್ತಿಗಾಗಲೇ ಮುಖ್ಯ ರಸ್ತೆಯನ್ನು ಬಿಟ್ಟು ಒಳ ರಸ್ತೆಯಲ್ಲಿ ಸಾಗಿದ್ದ ಬೈಕ್ ಸವಾರ ಖಾಲಿ ಶೆಡ್ ಬಳಿ ಬೈಕ್ ನಿಲ್ಲಿಸಿ ಆಕೆಯನ್ನು ಶೆಡ್‌ನೊಳಗೆ ಕೂಡಿಹಾಕಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಶೆಡ್ ಗೆ ತನ್ನ ಸ್ನೇಹಿತೆಯೊಂದಿಗೆ ಪೊಲೀಸರು ಆಗಮಿಸಿದಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೇ.ಅತ್ಯಾಚಾರಕ್ಕೆ ಒಳಗಾದ ಯುವತಿಯನ್ನು ತಕ್ಷಣ ಹೆಬ್ಬಗೋಡಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಈ ಘಟನೆಯಲ್ಲಿ ಯುವತಿ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯ ಆಗಿರುವುದು ಖಚಿತವಾಗಿದೆ. ಆದರೆ, ಅತ್ಯಾಚಾರ ಆಗಿದೆಯೋ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ ವೈದ್ಯಕೀಯ ಪರೀಕ್ಷೆಯನ್ನು ಮಾಡಲಾಗಿದ್ದು, ವರದಿ ಬಂದ ನಂತರ ಖಚಿತ ಮಾಹಿತಿ ಲಭ್ಯವಾಗಲಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ತಿಳಿಸಿದರು.