ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ ಮದುವೆಯ ಮೊದಲ ರಾತ್ರಿಯೇ ವಧುವೊಬ್ಬಳು ಹಣಕ್ಕಾಗಿ ಬೇಡಿಕೆಯಿಟ್ಟು, ಪತಿಯ ಇಡೀ ಕುಟುಂಬಕ್ಕೇ ಪ್ರಾಣ ಬೆದರಿಕೆ ಹಾಕಿರುವ ಸಿನಿಮೀಯ ಮಾದರಿಯ ಘಟನೆ ಬೆಳಕಿಗೆ ಬಂದಿದೆ. “90 ಲಕ್ಷ ರೂಪಾಯಿ ನೀಡಿದರೆ ಮಾತ್ರ ಮುಖದ ಮುಸುಕು (Veil) ತೆಗೆಯುವೆ” ಎಂದು ಪಟ್ಟು ಹಿಡಿದ ವಧು, ಬೇಡಿಕೆ ಈಡೇರದಿದ್ದಾಗ ತನ್ನ ಸಂಬಂಧಿಕರೊಂದಿಗೆ ಸೇರಿ ಪತಿಯ ಕುಟುಂಬವನ್ನು ಕೊಲ್ಲಲು ಸಂಚು ರೂಪಿಸಿದ್ದಾಳೆ ಎಂಬ ಆಘಾತಕಾರಿ ದೂರು ದಾಖಲಾಗಿದೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ ಗೌರವ್ ಮತ್ತು ಕಲ್ಪನಾ ಎಂಬುವವರ ಮದುವೆ ನಡೆದಿತ್ತು. ಆದರೆ, ಅಂದಿನಿಂದ ಆರಂಭವಾದ ಈ ವಿವಾದ ಈಗ ನ್ಯಾಯಾಲಯದ ಮೆಟ್ಟಿಲೇರಿದೆ.
ಪತಿಯ ಮನೆಯವರ ದೂರಿನ ಪ್ರಕಾರ, ಮದುವೆಯ ಮೊದಲ ರಾತ್ರಿ ವಧು ಕಲ್ಪನಾ ಪತಿಯ ಮುಂದೆ 90 ಲಕ್ಷ ರೂಪಾಯಿಗಳ ಬೇಡಿಕೆಯಿಟ್ಟಿದ್ದಾಳೆ. ಹಣ ನೀಡದ ಹೊರತು ತಾನು ಮುಖ ತೋರಿಸುವುದಿಲ್ಲ ಮತ್ತು ಯಾವುದೇ ವಿಧಿವಿಧಾನಗಳನ್ನು ಪೂರೈಸುವುದಿಲ್ಲ ಎಂದು ಹಠ ಹಿಡಿದಿದ್ದಾಳೆ.
ಹಣ ನೀಡಲು ಪತಿ ನಿರಾಕರಿಸಿದಾಗ, ವಧು ತನ್ನ ಚಿನ್ನಾಭರಣಗಳೊಂದಿಗೆ ತವರು ಮನೆಗೆ ಮರಳಿದ್ದಾಳೆ ಎಂದು ಆರೋಪಿಸಲಾಗಿದೆ.ಇತ್ತೀಚೆಗೆ ಮಾರ್ಚ್ 26 ರಂದು ವಧುವಿನ ಕಡೆಯವರು ಪತಿಯ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಮನೆಯ ಗ್ಯಾಸ್ ಪೈಪ್‌ಲೈನ್ (PNG) ಅನ್ನು ತುಂಡರಿಸಿ, ಇಡೀ ಕುಟುಂಬವನ್ನೇ ಜೀವಂತವಾಗಿ ಸುಡಲು ಪ್ರಯತ್ನಿಸಿದ್ದಾರೆ ಎಂದು ಸಂತ್ರಸ್ತ ಕುಟುಂಬ ಗಂಭೀರ ಆರೋಪ ಮಾಡಿದೆ.








