ಮೈಸೂರು: ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಅನ್ನು ಘೋಷಣೆ ಮಾಡಲಾಗಿದೆ. ಮಾರ್ಚ್.3ರಂದು ನಡೆಯುವಂತ ವಿವಿಯ 104ನೇ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುತ್ತಿದೆ.
ಮಂಡ್ಯದ ಸುಪುತ್ರ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡುವ ಮೂಲಕ ಮೈಸೂರು ವಿಶ್ವ ವಿದ್ಯಾಲಯದ ಗೌರವ ಇನ್ನಷ್ಟು ಹೆಚ್ಚಿದೆ ಎಂದು ವಿಧಾನ ಪರಿಷತ್ ಶಾಸಕರಾದ ದಿನೇಶ ಗೂಳಿಗೌಡ ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ದಿನೇಶ್ ಗೂಳಿಗೌಡ, ಮೈಸೂರು ವಿಶ್ವ ವಿದ್ಯಾಲಯದ 104 ನೇ ಘಟಿಕೋತ್ಸವವು ಮಾರ್ಚ್ 3 ರಂದು ಆಯೋಜನೆಯಾಗಿದ್ದು, ಅಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಗೌರವ ಡಾಕ್ಟರೇಟ್ ನೀಡಲು ವಿವಿ ಸಿಂಡಿಕೇಟ್ ತೀರ್ಮಾನಿಸಿರುವುದು ಅತ್ಯಂತ ಸ್ವಾಗತಾರ್ಹ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಸುಪುತ್ರರೊಬ್ಬರಿಗೆ ಮೈಸೂರು ವಿವಿ ಗೌರವ ಡಾಕ್ಟರೇಟ್ ನೀಡಿರುವುದು ಶ್ಲಾಘನಾರ್ಹ, ಅಭಿನಂದನಾರ್ಹ. ಅವರಿಗೆ ಮಂಡ್ಯ ಜಿಲ್ಲೆಯ ಜನರ ಪರವಾಗಿ, ವೈಯಕ್ತಿಕವಾಗಿ ಅಭಿನಂದಿಸುತ್ತೇನೆ ಎಂದು ದಿನೇಶ್ ಗೂಳಿಗೌಡ ಹೇಳಿದ್ದಾರೆ.
ಸುಶಿಕ್ಷಿತ ಸಿಎಂ
ಮಂಡ್ಯ ಜಿಲ್ಲೆಯ ಮಣ್ಣಿನ ಮಗ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ (ಎಸ್.ಎಂ.ಕೃಷ್ಣ) ಅವರ ನಾಡು ಕಂಡ ಅತ್ಯಂತ ಸುಶಿಕ್ಷಿತ ಮುಖ್ಯಮಂತ್ರಿಯಾಗಿದ್ದಾರೆ. ಮೈಸೂರು ವಿವಿ ವ್ಯಾಪ್ತಿಯ ಮೈಸೂರು ಮಹಾರಾಜ ಕಾಲೇಜ್‌ನಲ್ಲಿ ಪದವಿ ಪಡೆದ ನಂತರ ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜ್‌ನಲ್ಲಿ ಕಾನೂನು ಪದವಿ ಪಡೆದಿದ್ದರು. ನಂತರ ಅಮೆರಿಕದ ಟೆಕ್ಸಸ್ ರಾಜ್ಯದ ಸದರ್ನ್ ಮೆಥಡಿಸ್ಟ್ ವಿಶ್ವ ವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಕಾನೂನಿನ ಬಗ್ಗೆ ಉನ್ನತ ಶಿಕ್ಷಣ ಪಡೆದವರು. ವಾಷಿಂಗ್ಟನ್‌ನಲ್ಲಿರುವ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ ಫುಲ್‍ಬ್ರೈಟ್ ವಿದ್ಯಾರ್ಥಿವೇತನವನ್ನೂ ಪಡೆದುಕೊಡಿದ್ದರು ಎಂದು ದಿನೇಶ್ ಗೂಳಿಗೌಡ ಅವರು ಎಸ್‌ಎಂಕೆ ಅವರ ಶೈಕ್ಷಣಿಕ ಸಾಧನೆ ಬಗ್ಗೆ ವಿವರಿಸಿದ್ದಾರೆ.
ಶ್ರೇಷ್ಠ ರಾಜಕಾರಣಿ
ಎಸ್.ಎಂ. ಕೃಷ್ಣ ಅವರು ಆರು ದಶಕಗಳ ಸುದೀರ್ಘ ಅವಧಿಗೆ ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿದ್ದವರು. ತಾವು ಅಲಂಕರಿಸಿದ ಹುದ್ದೆಗಳಿಗೆ ಅವರು ನ್ಯಾಯ ಒದಗಿಸಿಕೊಟ್ಟ ಒಬ್ಬ ಶ್ರೇಷ್ಠ ರಾಜಕಾರಣಿ. ಅವರ ಸಾಧನೆಯನ್ನು ಪರಿಗಣಿಸಿ ಭಾರತ ಸರ್ಕಾರವು ಈಚೆಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.
ಎಸ್.ಎಂ. ಕೃಷ್ಣ ಅವರು, ಕರ್ನಾಟಕ ವಿಧಾನಸಭೆ, ವಿಧಾನ ಪರಿಷತ್, ರಾಜ್ಯಸಭೆ, ಲೋಕಸಭೆಗೆ ಹಾಗೂ ವಿಧಾನ ಸಭಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1999 ರಿಂದ 2004 ರವರೆಗೆ ಕರ್ನಾಟಕದ ಮುಖ್ಯಮಂತ್ರಿಗಳಾಗಿ, ರಾಜ್ಯದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ಅದಕ್ಕೂ ಪೂರ್ವ ಅವರು ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. 2009 ರಿಂದ 2012 ರವರೆಗೆ ಮನಮೋಹನ ಸಿಂಗ್ ಸರ್ಕಾರದಲ್ಲಿ ಕೇಂದ್ರ ವಿದೇಶಾಂಗ ಸಚಿವರಾಗಿದ್ದರು. 2004 ರಿಂದ 2008 ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ ಹೆಸರು ಮಾಡಿದ್ದಾರೆ ಎಂದು ದಿನೇಶ ಗೂಳಿಗೌಡ ಅವರು ಕೃಷ್ಣರ ಸಾಧನೆಗಳನ್ನು ಬಣ್ಣಿಸಿದ್ದಾರೆ.
ವಿವಿ ಗೌರವ ಹೆಚ್ಚಳ
ಮೈಸೂರು ವಿಶ್ವ ವಿದ್ಯಾಲಯವು ಮೈಸೂರು ಮಹಾರಾಜರಿಂದ ಸ್ಥಾಪನೆಯಾದ ದೇಶದ ಅತ್ಯಂತ ಹಳೆಯ ವಿಶ್ವ ವಿದ್ಯಾಲಯಗಳಲ್ಲಿ ಒಂದಾಗಿದೆ. ವಿವಿಗೆ ದೇಶದ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಘನತೆ, ಗೌರವವಿದೆ. ವಿವಿಯಲ್ಲಿ ಓದಿದ ಹಳೆಯ ವಿದ್ಯಾರ್ಥಿಯೊಬ್ಬ ವಿದೇಶಾಂಗ ಸಚಿವರಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದರು. ರಾಜ್ಯ ಕಂಡ ಪ್ರಸಿದ್ಧ ಮುಖ್ಯಮಂತ್ರಿಯಾಗಿದ್ದರು ಎಂಬುದೇ ಹೆಮ್ಮೆಯ ವಿಷಯವಾಗಿದೆ. ಈಗ ಅವರಿಗೆ ಗೌರವ ಡಾಕ್ಟರೇಟ್ ನೀಡುತ್ತಿರುವುದರಿಂದ ಎಸ್.ಎಂ. ಕೃಷ್ಣ ಅವರಿಗೆ ಗೌರವ ಹೆಚ್ಚಿದೆ ಎಂಬುದಕ್ಕಿಂತ ಮೈಸೂರು ವಿಶ್ವ ವಿದ್ಯಾಲಯಕ್ಕೆ ಬಹು ದೊಡ್ಡ ಕೀರ್ತ ಬಂದಂತಾಗಿದೆ. ವಿವಿ ಒಬ್ಬ ಸಂಭಾವಿತ ಹಾಗೂ ಅರ್ಹ ವ್ಯಕ್ತಿಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿರುವುದು ಶ್ಲಾಘನೀಯ ಎಂದು ದಿನೇಶ್ ಗೂಳಿಗೌಡ ಅಭಿಪ್ರಾಯಪಟ್ಟಿದ್ದಾರೆ.
ಮೊದಲ ದಿನದ ‘ದ್ವಿತೀಯ PUC ಪರೀಕ್ಷೆ’ ಯಶಸ್ವಿ: 5,07,556 ವಿದ್ಯಾರ್ಥಿಗಳು ಹಾಜರ್, 18,231 ಗೈರು
ರಾಜ್ಯ ಸರ್ಕಾರದಿಂದ ‘ಗೃಹ ಜ್ಯೋತಿ ಯೋಜನೆ’ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್ | Gruha Jyothi Scheme