ನವದೆಹಲಿ: 2047ಕ್ಕೆ ವಿಕಸಿತ ಭಾರತ ಸಾಕಾರ ಮಾಡಲೇಬೇಕೆನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದ ಭಾಗವಾಗಿ ಸಿಂಟೆರ್ಡ್ ರೇರ್ ಅರ್ಥ್ ಪರ್ಮನೆಂಟ್ ಮ್ಯಾಗ್ನೆಟ್ಸ್ (REPM) ಉತ್ಪಾದನೆ ಉತ್ತೇಜಿಸಲು ₹7,280 ಕೋಟಿ ಮೊತ್ತದ ಅತ್ಯಂತ ಮಹತ್ವದ ಬೃಹತ್ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಜಾಗತಿಕ ಸವಾಲುಗಳನ್ನು ಮೆಟ್ಟಿ ನಿಲ್ಲಲು ಆರ್ ಇಪಿಎಂ ಪೂರಕ ವ್ಯವಸ್ಥೆಯನ್ನುರಾಷ್ಟ್ರದ ಉದ್ದಗಲಕ್ಕೂ ಉತ್ತೇಜಿಸಲು, ಈ ಕ್ಷೇತ್ರದಲ್ಲಿ ಸದೃಢವಾದ ಸ್ವಾವಲಂಬನೆ ಸಾಧಿಸಲು ಮತ್ತು ಜಾಗತಿಕ ಆರ್ ಇಪಿಎಂ ಮಾರುಕಟ್ಟೆಯಲ್ಲಿ ಭಾರತವನ್ನು ಪ್ರಮುಖ ರಾಷ್ಟ್ರವನ್ನಾಗಿ ಕೇಂದ್ರ ಸರ್ಕಾರವು ದಿಟ್ಟ ಇರಿಸಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಸಂಪುಟ ನಿರ್ಧಾರದ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿ ಪ್ರಧಾನಿಗಳಿಗೆ ಕೃತಜ್ಞತೆ ಸಲ್ಲಿಸಿರುವ ಸಚಿವರು; ಈ ಯೋಜನೆ 6,000 ಎಂಟಿಪಿಎ ಸಿಂಟೆರ್ಡ್ ಆರ್ ಇಪಿಎಂನ ಸ್ವದೇಶಿ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಆಟೋಮೊಬೈಲ್, ರಕ್ಷಣೆ ಮತ್ತು ವೈಮಾನಿಕ ಕ್ಷೇತ್ರಗಳಿಗೆ ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತದೆ ಮತ್ತು ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಬಹುದೊಡ್ಡ ಶಕ್ತಿಯನ್ನು ತುಂಬುತ್ತದೆ. ಜತೆಗೆ 2070ರ ವೇಳೆಗೆ ಭಾರತದಲ್ಲಿ ಇಂಗಾಲ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯಕ್ಕೆ ತರುವ ಗುರಿಯನ್ನು ಹೊಂದಿದೆ ಎಂದು ಸಚಿವರು ಹೇಳಿದ್ದಾರೆ.
ಭಾರತದ ಅಭಿವೃದ್ಧಿ ಪರ್ವದಲ್ಲಿ ಇಂದೊಂದು ಕ್ರಾಂತಿಕಾರಿ ಹೆಜ್ಜೆಯಾಗಿದ್ದು, ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಳೆದ ಜೂನ್ 17, 2025ರಂದು ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ನಡೆದ ನಿರ್ಣಾಯಕ ಅಂತರ ಸಚಿವಾಲಯಗಳ ಸಭೆ ನಡೆಸಿ ಸಿಂಟೆರ್ಡ್ ರೇರ್ ಅರ್ಥ್ ಪರ್ಮನೆಂಟ್ ಮ್ಯಾಗ್ನೆಟ್ಸ್ (REPM) ಮಹತ್ವದ ಬಗ್ಗೆ ಚರ್ಚೆ ನಡೆಸಿದ್ದರು.
ಅಂದು ಪರಮಾಣು ಶಕ್ತಿ ಇಲಾಖೆ, ಬೃಹತ್ ಕೈಗಾರಿಕೆ ಸಚಿವಾಲಯ, ಗಣಿ ಸಚಿವಾಲಯ, ವಿದೇಶಾಂಗ ಸಚಿವಾಲಯ, ಉಕ್ಕು ಸಚಿವಾಲಯ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮತ್ತು ಇತರ ಪ್ರಮುಖ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ಧ ಆ ಸಭೆಯಲ್ಲಿ ಸ್ವದೇಶಿಯವಾಗಿ ಅಪರೂಪದದ ಖನಿಜಗಳನ್ನು ಶೋಧಿಸಿ ಬಳಕೆ ಮಾಡಿಕೊಳ್ಳುವ ಪೂರಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಕಾರ್ಯತಂತ್ರದ ಪ್ರಾಮುಖ್ಯತೆ ಬಗ್ಗೆ ಒತ್ತಿ ಹೇಳಿದ್ದರಲ್ಲದೆ, ಇದು ರಾಷ್ಟ್ರೀಯ ತುರ್ತು ಅಗತ್ಯ ಎಂದು ಪ್ರತಿಪಾದಿಸಿದ್ದರು.
ಆಧುನಿಕ ಉನ್ನತ ಮಟ್ಟದ ತಂತ್ರಜ್ಞಾನ ಬಳಕೆಯ ಕೈಗಾರಿಕೆಗಳಲ್ಲಿ ಬಳಸಲಾಗುವ ಪ್ರಬಲ ಮತ್ತು ಅತ್ಯಂತ ನಿರ್ಣಾಯಕ ಮ್ಯಾಗ್ನೆಟ್ (ಆಯಸ್ಕಾಂತ) ಗಳಾದ ಅಪರೂಪದ ಭೂಮಿಯಲ್ಲಿನ ಶಾಶ್ವತ ಆಯಸ್ಕಾಂತಗಳಿಗೆ ಸಂಪೂರ್ಣ ಸಂಯೋಜಿತ, ಸ್ಥಳೀಯ ಪೂರಕ ಸರಪಳಿ ವ್ಯವಸ್ಥೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿರುವ ರಾಷ್ಟ್ರದ ಇತಿಹಾಸದಲ್ಲಿಯೇ ಕೇಂದ್ರ ಸರ್ಕಾರ ಕೈಗೊಂಡ ಮಹತ್ವದ ಮೊತ್ತ ಮೊದಲ ಉಪಕ್ರಮ ಇದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ಈ ನಿರ್ಧಾರವನ್ನು ಭಾರತೀಯ ಕೈಗಾರಿಕೆ ಪ್ರಗತಿಯ ದಿಕ್ಕಿನಲ್ಲಿ ಪರಿವರ್ತನಾತ್ಮಕ ಹಾಗೂ ಐತಿಹಾಸಿಕ ಹೆಜ್ಜೆ ಎಂದು ಬಣ್ಣಿಸಿರುವ ಕುಮಾರಸ್ವಾಮಿ ಅವರು; “2047ರ ಹೊತ್ತಿಗೆ ಭಾರತ ವಿಕಸಿತ ಭಾರತವಾಗಿ ಅವತರಿಸಬೇಕು. ಈ ನಿಟ್ಟಿನಲ್ಲಿ ಭಾರತದ ವೇಗದ ಪಯಣಕ್ಕೆ ಪ್ರೇರಕ ಶಕ್ತಿಯಾಗಿ ಈ ನಿರ್ಧಾರಕ್ಕೆ ಕಾರಣೀಭೂತರಾಗಿದ್ದಾರೆ” ಎಂದು ಬೃಹತ್ ಕೈಗಾರಿಕೆ ಸಚಿವರು ಹೇಳಿದ್ದಾರೆ.
“ಮೊದಲ ಬಾರಿಗೆ, ನಾವು ಸಿಂಟರ್ಡ್ ನಿಯೋಡೈಮಿಯಮ್ ಐರನ್ ಬೋರಾನ್ ಎಂಬ ಅಪರೂಪದ, ಭೂಮಿಯಲ್ಲಿನ ಶಾಶ್ವತ ಆಯಸ್ಕಾಂತಗಳನ್ನು ಹೊರತೆಗೆದು ಬಳಕೆ ಮಾಡಲು ಆರಂಭದಿಂದ ಅಂತ್ಯದವರೆಗೂ ಸಂಪೂರ್ಣವಾಗಿ ಸ್ವದೇಶಿ ಪೂರಕ ವ್ಯವಸ್ಥೆಯನ್ನು ನಿರ್ಮಿಸಲು ₹7,280 ಕೋಟಿ ವೆಚ್ಚದೊಂದಿಗೆ ಸಮರ್ಪಿತ, ಮಿಷನ್ ಆಧರಿತ ಯೋಜನೆಯನ್ನು ನಾವು ಪ್ರಾರಂಭಿಸುತ್ತಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
ಇದು ರಾಷ್ಟ್ರೀಯ ಅಗತ್ಯ: ಭವಿಷ್ಯದ ಕೈಗಾರಿಕೆಗಳಿಗೆ ಪೂರೈಕೆ ಸರಪಳಿಗೆ ಬಲ:
ಭೂಮಿಯ ಅಪರೂಪದ ಶಾಶ್ವತ ಆಯಸ್ಕಾಂತಗಳು, ವಿಶೇಷವಾಗಿ ಸಿಂಟರ್ಡ್ ನಿಯೋಡೈಮಿಯಮ್ ಐರನ್ ಬೋರಾನ್ (NdFeB) ಆಯಸ್ಕಾಂತಗಳು ವಿದ್ಯುತ್ ಚಲನಶೀಲತೆ, ನವೀಕರಿಸಬಹುದಾದ ಶಕ್ತಿ, ರಕ್ಷಣಾ ವ್ಯವಸ್ಥೆಗಳು, ಏರೋಸ್ಪೇಸ್, ರೊಬೊಟಿಕ್ಸ್, ಕೈಗಾರಿಕಾ ಎಲೆಕ್ಟ್ರಾನಿಕ್ಸ್ ಮತ್ತು ಉದಯೋನ್ಮುಖ ಕ್ಲೀನ್ ಟೆಕ್ ನಾವೀನ್ಯತೆಗಳಿಗೆ ಅನಿವಾರ್ಯವಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಏನು ಯೋಜನೆ? ಎಷ್ಟು ವೆಚ್ಚ?
•ಯೋಜನೆ ಅಡಿಯಲ್ಲಿ ಒಟ್ಟು ₹7,280 ಕೋಟಿ ವೆಚ್ಚ
•₹750 ಕೋಟಿ ಬಂಡವಾಳ ಸಬ್ಸಿಡಿ
•₹6,450 ಕೋಟಿ ಮೊತ್ತದಷ್ಟು ಮಾರಾಟ ಸಂಬಂಧಿತ ಉತ್ತೇಜನ (5 ವರ್ಷಗಳವರೆಗೆ ₹2,150/ಕೆಜಿಗೆ ಮಿತಿ)
•ಆಡಳಿತ, ನಿರ್ವಹಣೆಗಾಗಿ ₹80 ಕೋಟಿ
•ಯೋಜನೆಯ ಅವಧಿ 7 ವರ್ಷ; ವ್ಯವಸ್ಥೆ ಮಾಡಿಕೊಳ್ಳಲು 2 ವರ್ಷ, ಹಾಗೂ ಪ್ರೋತ್ಸಾಹಕ ವಿತರಣೆಗೆ 5 ವರ್ಷ
•ರಾಷ್ಟ್ರೀಯ ಸಾಮರ್ಥ್ಯದ ಗುರಿ: NdFeB ಆಯಸ್ಕಾಂತಗಳ 6,000 MTPA
* ಫಲಾನುಭವಿಗಳು: ಪಾರದರ್ಶಕ ಬಿಡ್ಡಿಂಗ್ ಪ್ರಕ್ರಿಯೆ ಮೂಲಕ ಆಯ್ಕೆಯಾದ ಐದು ಜಾಗತಿಕ ಕಂಪನಿಗಳು
ಈ ಯೋಜನೆಯು NdPr ಆಕ್ಸೈಡ್‌ನಿಂದ ಸಿಂಟರ್ಡ್ ಮ್ಯಾಗ್ನೆಟ್ ತಯಾರಿಕೆಯವರೆಗೆ ಸಂಪೂರ್ಣ ಮೌಲಿಕ ಸರಪಳಿಯನ್ನು ವಿಸ್ತರಣೆ ಮಾಡುತ್ತದೆ. ಇದು ಭಾರತವು ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಗಣಿಯಿಂದ ಮ್ಯಾಗ್ನೆಟ್‌ಗೆ ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಖಚಿತಪಡಿಸುತ್ತದೆ.
ಸ್ವಾವಲಂಬನೆಯತ್ತ ಹೆಜ್ಜೆ, ಆಮದು ಅವಲಂಬನೆಗೆ ವಿದಾಯ:
ಪ್ರಧಾನಿಗಳ ಸ್ವದೇಶಿ ಮಂತ್ರದೊಂದಿಗೆ ಆಮದು ಅವಲಂಬನೆಯನ್ನು ಕಡಿಮೆ ಮಾಡುವುದು, ವಾಹನ, ರಕ್ಷಣೆ ಮತ್ತು ಏರೋಸ್ಪೇಸ್ ವಲಯಗಳಿಗೆ ಸುರಕ್ಷಿತ ಮತ್ತು ಸ್ಥಿರವಾದ ಪೂರೈಕೆ ಸರಪಳಿಗಳನ್ನು ಖಚಿತಪಡಿಸುವುದು ಮತ್ತು ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ ತರುವುದು, ಉತ್ಕೃಷ್ಟ ತಾಂತ್ರಿಕತೆ ಹಾಗೂ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ರೂಪಿಸಲಾಗಿರುವ ಯೋಜನೆ ಇದಾಗಿದೆ.
HR88B8888 ಇದು ಭಾರತದ ಅತ್ಯಂತ ದುಬಾರಿ ಕಾರು ನೋಂದಣಿ ಸಂಖ್ಯೆ: ಬರೋಬ್ಬರಿ 1.7 ಕೋಟಿಗೆ ಮಾರಾಟ
BIG NEWS : ರಾಜ್ಯದಲ್ಲಿ ಅವಕಾಶ ಸಿಕ್ಕರೆ ದಲಿತರನ್ನು ‘CM’ ಮಾಡುತ್ತೇವೆ : ಸಚಿವ ಕೆಜೆ ಜಾರ್ಜ್ ಹೇಳಿಕೆ








