ಉಡುಪಿ : ಕಳೆದೊಂದು ವಾರದಿಂದ ಕರಾವಳಿಯಲ್ಲಿ ಮಳೆ ಸುರಿಯುತ್ತಿದೆ. ಅನೇಕ ಕಡೆ ಪ್ರವಾಹ ಅವಾಂತರ ಕೂಡ ಸೃಷ್ಟಿಯಾಗಿದೆ.ಈ ಮಧ್ಯ ಮತ್ತೆ ನಾಲ್ಕೈದು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಲರ್ಟ್ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಾಳೆ ಉಡುಪಿ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಉಡುಪಿಯಲ್ಲಂತೂ ರಣ ಮಳೆಯಿಂದಾಗಿ ನೆರೆ ಉಂಟಾಗಿದೆ. ಈಗಾಗಲೇ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ರಕ್ಷಣಾ ತಂಡ ಸಹ ಬೀಡು ಬಿಟ್ಟಿದೆ. ಹೀಗಿರುವಾಗ ಇಂದಿನಿಂದ ಮತ್ತೆ ಮಳೆ ಆರ್ಭಟ ಮುಂದುವರಿಕೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉಡುಪಿಯಲ್ಲಿ ಜು.9 ರಂದು ಬಾರೀ ಮಳೆಯಾಗುವ ಹಿನ್ನಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿರುವುದರಿಂದ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಎಂಜಿನಿಯರಿಂಗ್ ಕಾಲೇಜುಗಳು, ಡಿಪ್ಲೊಮಾ ಕಾಲೇಜುಗಳು, ಐಟಿಐ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ತರಗತಿಗಳು ಎಂದಿನಂತೆ ಇರಲಿವೆ.
ಕರಾವಳಿ ಭಾಗ ಸೇರಿದಂತೆ ಕಳೆದ ಒಂದು ವಾರದಿಂದಲೂ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೆಲ ದಿನ ಶಾಲೆಗಳಿಗೆ ಮಾತ್ರ ರಜೆ ನೀಡಲಾಗಿತ್ತು. ಆದ್ರೆ, ಮಳೆ ಜಾಸ್ತಿಯಾಗಿ ಎಲ್ಲೆಡೆ ಪ್ರವಾಹ ಭೀತಿ ಶುರುವಾಗಿದ್ದರಿಂದ ನಾಳೆ ಕಾಲೇಜುಗಳಿಗೂ ಸಹ ರಜೆ ನೀಡಲಾಗಿದೆ.