ಶಿವಮೊಗ್ಗ : ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್ ಧರಿಸುವುದರಿಂದ ನಿಮ್ಮ ಅಮೂಲ್ಯ ಜೀವ ಉಳಿಯುತ್ತದೆ ಎಂದು ನಗರ ಠಾಣೆ ವೃತ್ತ ನಿರೀಕ್ಷಕ ಪುಲ್ಲಯ್ಯ ರಾಥೋಡ್ ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸಾಗರ ಹೋಟೆಲ್ ವೃತ್ತದಲ್ಲಿ ಶುಕ್ರವಾರ ಪೊಲೀಸ್ ಇಲಾಖೆಯಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವಂತೆ ಗುಲಾಬಿ ಹೂ ನೀಡಿ ಮಾತನಾಡಿದಂತ ಅವರು, ಪೊಲೀಸ್ ಇಲಾಖೆಯಿಂದ ಹೆಲ್ಮೆಟ್ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಇರುವುದರಿಂದ ಸಾಕಷ್ಟು ಅವಘಡಗಳು ಸಂಭವಿಸುತ್ತಿದೆ. ನಿಮ್ಮನ್ನು ನಂಬಿ ನಿಮ್ಮ ಕುಟುಂಬ ಇರುತ್ತದೆ. ಅಪಘಾತವಾದರೆ ಮೊದಲು ತಲೆಗೆ ಏಟು ಬೀಳುತ್ತದೆ. ತಲೆಯನ್ನು ರಕ್ಷಣೆ ಮಾಡಿಕೊಳ್ಳಲು ಗುಣಮಟ್ಟದ ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂದರು.
ಸಾಗರ ನಗರದ ಪ್ರಮುಖ ವೃತ್ತಗಳಲ್ಲಿ ಇಂದಿನಿಂದ ಹೆಲ್ಮೆಟ್ ಧರಿಸುವಂತೆ ಗುಲಾಬಿ ಹೂ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ. ಹೆಲ್ಮೆಟ್ ಧರಿಸದೆ ಬಂದರೆ ಅವರಿಗೆ ನಿಯಮಾವಳಿ ಪ್ರಕಾರ ದಂಡ ವಿಧಿಸಲಾಗುತ್ತಿದೆ. ವಾಹನ ಸವಾರರು ಇಲಾಖೆ ಕಾನೂನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.
ದ್ವಿಚಕ್ರ ವಾಹನ ಸವಾರರೇ ಕೈ-ಕಾಲು ಮುರಿದರೇ ಸರಿ ಹೋಗುತ್ತೆ. ತಲೆಗೆ ಪೆಟ್ಟು ಬಿದ್ದರೇ ಬದುಕೋದೇ ಕಷ್ಟವಾಗುತ್ತದೆ. ನೀವು ಸಾವನ್ನಪ್ಪಿದರೇ ನಿಮ್ಮನ್ನು ನಂಬಿಕೊಂಡಿದ್ದಂತ ಕುಟುಂಬ ಬೀದಿಪಾಲಾಗುತ್ತದೆ. ಹೀಗಾಗಿ ದ್ವಿಚಕ್ರ ವಾಹನ ಚಲಾಯಿಸುವಾಗ ತಪ್ಪದೇ ಹೆಲ್ಮೆಟ್ ಧರಿಸಿ, ವಾಹನ ಚಲಾಯಿಸೋದು ಮರೆಯಬೇಡಿ ಎಂಬುದು ಕೆಎನ್ಎನ್ ಸಂಸ್ಥೆಯ ಕಳಕಳಿ ಕೂಡ ಆಗಿದೆ.








