ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಬಿಸಿಲಿನ ಬೇಗೆಗೆ ರಾಜ್ಯದಲ್ಲಿ ಇಬ್ಬರು ವೃದ್ಧೆಯರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕುರಕುಂದಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಾಲಾ ಹೂಳೆತ್ತುವ ಕೆಲಸ ಮಾಡುತ್ತಿದ್ದಾಗ ಬಿಸಿಲಿನ ತಾಪದಿಂದ ಕುಸಿದು ಬಿದ್ದು ಹಣಮಂತಿ ಮಲ್ಲಿಕಾರ್ಜುನಪ್ಪ (೫೨) ಎಂಬ ಮಹಿಳೆ ಮೃತಪಟ್ಟಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಿಸಿಲಿನ ತಾಪದಿಂದ ದಾರಿ ಮದ್ಯೆಯೇ ಕುಸಿದು ಬಿದ್ದು ರತ್ನಮ್ಮ (೭೫) ಎಂಬ ಮಹಿಳೆ ಮೃತಪಟ್ಟಿದ್ದಾರೆ.
ಹವಾಮಾನ ಇಲಾಖೆಯು ಬೀದರ್, ಕಲಬುರಗಿ, ವಿಜಯಪುರ, ರಾಯಚೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಮೂರು ಬಿಸಿಗಾಳಿ ಬೀಸುವ ಎಚ್ಚರಿಕೆ ನೀಡಿದೆ.
ಈಗಾಗಲೇ ರಾಜ್ಯ ಹವಾಮಾನ ಇಲಾಖೆಯು ಮುಂದಿನ ಕೆಲವು ದಿನಗಳ ಕಾಲ ಒಣಹವೆಯೊಂದಿಗೆ ಬಿಸಿಗಾಳಿ ಬೀಸುವ ಕುರಿತು ಮುನ್ನಚ್ಚೆರಿಕೆ ನೀಡಿರುವ ಹಿನ್ನಲೆ ಪ್ರತಿಯೊಬ್ಬರು ಆದಷ್ಟು ನೆರಳಿನಲ್ಲಿ ಇರುವುದಕ್ಕೆ ಆದ್ಯತೆ ನೀಡಬೇಕು.
ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ದೇಹದಲ್ಲಿ ನಿರ್ಜಲೀಕರಣವನ್ನು ತಡೆಗಟ್ಟಲು ಓ.ಆರ್.ಎಸ್ ಜೀವಜಲ ಪುಡಿಯನ್ನು ಅಗತ್ಯವುಳ್ಳವರಿಗೆ ಕೊಡುವ ವ್ಯವಸ್ಥೆ ಮಾಡಲಾಗಿದೆ. ರೋಗಿಗಳ ಆರೈಕೆಗಾಗಿ, ಐವಿ ಪ್ಲೂಯಿಡ್ಸ್ ಮತ್ತು ಜೀವರಕ್ಷಕ ಔಷಧಗಳ ದಾಸ್ತಾನು ಇಟ್ಟುಕೊಳ್ಳಲಾಗಿದೆ. ಓ.ಆರ್.ಎಸ್. ದ್ರಾವಣವನ್ನು 1 ಲೀಟರ್ ನೀರಿಗೆ 1 ಪೊಟ್ಟಣದ ಸಂಪೂರ್ಣ ಪುಡಿಯನ್ನು ಹಾಕಿ 24 ಗಂಟೆಯೊಳಗಡೆ ಕುಡಿಯಲು ಬಳಸುವ ಮೂಲಕ ಬಿಸಿಲಿನ ಪ್ರಖರತೆಯಿಂದ ಉಂಟಾಗುವ ನಿರ್ಜಲೀಕರಣವನ್ನು ತಡೆಯಬಹುದು.
ಶಾಖಾಘಾತದ ಸಾಮಾನ್ಯ ಅಪಾಯದ ಚಿಹ್ನೆಗಳು:
ವಯಸ್ಕರಲ್ಲಿ ಅರೆಪ್ರಜ್ಞಾವಸ್ಥೆ, ಪ್ರಜ್ಞೆ ತಪ್ಪುವುದು, ಸಿಡಿಮಿಡಿಗೊಳ್ಳುವುದು, ಗಾಬರಿಗೊಳ್ಳುವುದು, ಅತಿಯಾದ ತಲೆನೋವು, ಚರ್ಮವು ಬಿಸಿ ಹಾಗೂ ಕೆಂಪಾದ ಒಣಚರ್ಮ, ಆತಂಕ, ತಲೆಸುತ್ತುವಿಕೆ, ಮಾಂಸಖಂಡಗಳಲ್ಲಿ ಸುಸ್ತು ಅಥವಾ ಸೆಳೆತ, ವಾಕರಿಕೆ ಮತ್ತು ವಾಂತಿ, ಮಕ್ಕಳಲ್ಲಿ ಆಹಾರ ಸೇವಿಸಲು ನಿರಾಕರಿಸುವುದು, ಕನಿಷ್ಠ ಮೂತ್ರ ವಿಸರ್ಜನೆ, ಬಾಯಿ ಒಣಗುವಿಕೆ, ಆಲಸ್ಯ, ಮೂರ್ಛೆ ಹೋಗುವುದು, ದೇಹದ ಯಾವುದೇ ಭಾಗದಲ್ಲಿ ರಕ್ತಸ್ರಾವ ಇವೆಲ್ಲವುಗಳೂ ಸಾಮಾನ್ಯ ಅಪಾಯದ ಚಿಹ್ನೆಗಳಾಗಿವೆ.
ಬಿಸಿಲಿನ ಶಾಖಾಘಾತಕ್ಕೆ ಅಗತ್ಯ ತುರ್ತು ಚಿಕಿತ್ಸೆ:
ಶಾಖಾಘಾತಕ್ಕೆ ಒಳಗಾದ ವ್ಯಕ್ತಿಯನ್ನು ನೆರಳಿರುವೆಡೆಗೆ ಸ್ಥಳಾಂತರಿಸಿ. ವ್ಯಕ್ತಿಯ ವಸ್ತ್ರಗಳನ್ನು ಸಡಿಲಗೊಳಿಸಿ, ಅಂಗಾತ ಮಲಗಿಸಿ, ಕಾಲುಗಳನ್ನು ಎತ್ತರಿಸಿ. ಸಾಮಾನ್ಯ ನೀರಿನಿಂದ ದೇಹವನ್ನು ಒರೆಸಬೇಕು ಮತ್ತು ಹತ್ತಿರದ ವೈದ್ಯರನ್ನು ಸಂಪರ್ಕಿಸಬೇಕು.