ಮಂಗಳೂರು : ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ರಾಜವಷ್ಟೇ ಅಲ್ಲದೆ ಇಡೀ ದೇಶವನ್ನೇ ಬೆಚ್ಚಿಬಿಳಿಸಿತ್ತು. ಇದೀಗ ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್ ತಪ್ಪೊಪ್ಪಿಕೊಂಡಿದ್ದಾನೆ. ಎನ್ಐಎ ವಿಶೇಷ ನ್ಯಾಯಾಲಯವು ಆತನ ಅರ್ಜಿಯನ್ನು ಅಂಗೀಕರಿಸಿದೆ. ನವೆಂಬರ್ 2022ರಲ್ಲಿ ಆಟೋರಿಕ್ಷಾದಲ್ಲಿ ಐಇಡಿ ಸ್ಫೋಟಿಸಿದ್ದನ್ನು ಶಾರೀಕ್ ಒಪ್ಪಿಕೊಂಡಿದ್ದಾನೆ.
ಸದ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯು ಅರ್ಜಿ ಸಲ್ಲಿಸಿದ್ದು, ತನ್ನ ಅರ್ಜಿಯಲ್ಲಿ ಶಾರೀಕ್, ಕುಕ್ಕರ್ನಲ್ಲಿ ಐಇಡಿ ಇಟ್ಟು ಸ್ಫೋಟ ಮಾಡಿದ್ದೇನೆ. ನನಗೆ ಪಶ್ಚಾತ್ತಾಪವಾಗಿದೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾನೆ. ಮೂರು ತಿಂಗಳ ವಿಚಾರಣೆ ಬಳಿಕ ನ್ಯಾಯಾಲಯವು ಈ ಅರ್ಜಿಯನ್ನು ಮಾನ್ಯಗೊಳಿಸಿದೆ. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಮೊಹಮ್ಮದ್ ಶಾರೀಕ್ ತಪ್ಪೊಪ್ಪಿಕೊಂಡಿದ್ದು, ಆತನ ಅರ್ಜಿಯನ್ನು ಎನ್ಐಎ ವಿಶೇಷ ನ್ಯಾಯಾಲಯವು ಅಂಗೀಕರಿಸಿದೆ.
ಪ್ರಕರಣ ಹಿನ್ನೆಲೆ?
ಶಿವಮೊಗ್ಗ ಮೂಲದ 27 ವರ್ಷದ ಶಾರೀಕ್, 2022ರ ನವೆಂಬರ್ 19ರಂದು ಆಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ ಪ್ರೆಶರ್ ಕುಕ್ಕರ್ ಬಾಂಬ್ ಅವನ ಮಡಿಲಲ್ಲೇ ಸ್ಫೋಟಗೊಂಡ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ. ಟೈಮರ್ ದೋಷದಿಂದ ಸಂಭವಿಸಿದ್ದ ಸ್ಫೋಟದಲ್ಲಿ ಆಟೋ ಚಾಲಕನೂ ಗಂಭೀರವಾಗಿ ಗಾಯಗೊಂಡಿದ್ದ. ನಂತರ ಶಂಕಿತ ಉಗ್ರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಬಳಿಕ ಎನ್ಐಎ ಅಧಿಕಾರಿಗಳು ಅವನನ್ನು ಬಂಧಿಸಿದ್ದರು.
2024ರ ಏಪ್ರಿಲ್ 20ರಂದು ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ನ್ಯಾಯಾಲಯ ಪ್ರಶ್ನಿಸಿದಾಗ ಶಾರೀಕ್ ತಾನು ನಿರಪರಾಧಿ ಎಂದು ಹೇಳಿದ್ದ. ಆದರೆ 2025ರ ಡಿಸೆಂಬರ್ನಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್ನ ಸೆಕ್ಷನ್ 229 ಅಡಿಯಲ್ಲಿ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿ ತನ್ನ ನಿಲುವು ಬದಲಿಸಿದ್ದ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಕಳೆದ ಮಾರ್ಚ್ 26ರಂದು ನ್ಯಾಯಾಲಯ ಈ ಅರ್ಜಿಯನ್ನು ಅಂಗೀಕರಿಸಿದೆ.








