ಭೋಪಾಲ್: ಸೊಸೆ ತ್ವೃಷಾ ಶರ್ಮಾ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಗುರುವಾರ ಬಂಧಿಸಿದೆ. ಸಿಬಿಐ ಅಧಿಕಾರಿಗಳ ತಂಡವು ಗುರುವಾರ ಭೋಪಾಲ್ನಲ್ಲಿರುವ ಗಿರಿಬಾಲಾ ಸಿಂಗ್ ಅವರ ನಿವಾಸಕ್ಕೆ ತೆರಳಿ, ಕೆಲ ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಅವರನ್ನು ಬಂಧಿಸಿದೆ.
ಈ ಮಹತ್ವದ ಬೆಳವಣಿಗೆಯ ದೃಶ್ಯಗಳು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಗಿರಿಬಾಲಾ ಅವರ ಮನೆಯ ಬಳಿ ಮಾಧ್ಯಮ ಪ್ರತಿನಿಧಿಗಳು ಹಾಗೂ ಭದ್ರತಾ ಪಡೆಗಳು ಜಮಾಯಿಸಿದ್ದವು.
ಪ್ರಕರಣದ ವಾಸ್ತವಾಂಶಗಳು ಮತ್ತು ಆರೋಪಿ ವಿರುದ್ಧದ ಗಂಭೀರ ಆರೋಪಗಳನ್ನು ಪರಿಗಣಿಸಿದ ಮಧ್ಯಪ್ರದೇಶ ಹೈಕೋರ್ಟ್, ಬುಧವಾರವಷ್ಟೇ ಗಿರಿಬಾಲಾ ಸಿಂಗ್ ಅವರಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು (Anticipatory Bail) ರದ್ದುಗೊಳಿಸಿತ್ತು. ಇದರ ಬೆನ್ನಲ್ಲೇ ಸಿಬಿಐ ಈ ಕ್ರಮ ಕೈಗೊಂಡಿದೆ. ಇದೇ ದಿನ, ಭೋಪಾಲ್ ಜಿಲ್ಲಾ ನ್ಯಾಯಾಲಯವು ತ್ವೃಷಾ ಅವರ ಪತಿ ಮತ್ತು ಪ್ರಕರಣದ ಪ್ರಮುಖ ಆರೋಪಿ ಸಮರ್ಥ್ ಸಿಂಗ್ನ ಕಸ್ಟಡಿಯನ್ನು ಸಿಬಿಐಗೆ ಹಸ್ತಾಂತರಿಸಿತ್ತು.
ನಟ ಮತ್ತು ಮಾಡೆಲ್ ಆಗಿದ್ದ ತ್ವೃಷಾ ಅವರು, ಗಿರಿಬಾಲಾ ಅವರ ಮಗ ಸಮರ್ಥ್ ಸಿಂಗ್ನನ್ನು ವಿವಾಹವಾಗಿ ಕೇವಲ ಐದು ತಿಂಗಳುಗಳಾಗಿದ್ದವು. ಮೇ 12ರಂದು ಅವರು ತಮ್ಮ ಅತ್ತೆಯ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ವಿಪರೀತದ ನಿರ್ಧಾರ ತೆಗೆದುಕೊಳ್ಳುವ ಮುನ್ನ, ತ್ವೃಷಾ ತನ್ನ ಪತಿ ಮತ್ತು ಕುಟುಂಬದವರ ನಡವಳಿಕೆಯ ಬಗ್ಗೆ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಚಾಟ್ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದರು.
ಈ ಹಿಂದೆ ಭೋಪಾಲ್ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದರು. ಆದರೆ, ನಿವೃತ್ತ ನ್ಯಾಯಾಧೀಶೆಯಾಗಿರುವ ಅತ್ತೆ ಗಿರಿಬಾಲಾ ಸಿಂಗ್ ಅವರು ತಮ್ಮ ಪ್ರಭಾವವನ್ನು ಬಳಸಿ ತನಿಖೆಯನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ತ್ವೃಷಾ ಅವರ ಪೋಷಕರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐಗೆ ವಹಿಸಬೇಕೆಂದು ಪೋಷಕರು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು.
ರಾಜ್ಯ ಸರ್ಕಾರವು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಸಿಬಿಐ ತನಿಖೆಗೆ ಆದೇಶಿಸಿತ್ತು. ಬಳಿಕ ಸುಪ್ರೀಂ ಕೋರ್ಟ್ ಕೂಡ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ನಿರ್ದೇಶನ ನೀಡಿತ್ತು. ಇದೀಗ ಸಿಬಿಐ ತಂಡವು ಭೋಪಾಲ್ನ ಕಟಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಅನ್ನು ಮರು-ನೋಂದಣಿ ಮಾಡಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ತನಿಖೆಯ ಭಾಗವಾಗಿ ಸಿಬಿಐ ತಂಡವು ತ್ವೃಷಾ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಕಟಾರಾ ಹಿಲ್ಸ್ನ ಸಿಂಗ್ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.








