ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಸರ್ಕಾರ ರಚನೆಯ ಪ್ರಕ್ರಿಯೆ ಸದ್ಯಕ್ಕೆ ಕೊಂಚ ವಿಳಂಬವಾಗುವ ಲಕ್ಷಣಗಳು ಕಾಣಿಸುತ್ತಿವೆ. ನಾಳೆ ನಡೆಯಬೇಕಿದ್ದ ಪ್ರಮಾಣವಚನ ಸ್ವೀಕಾರ ಸಮಾರಂಭವು ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ.
ರಾಜ್ಯಪಾಲರ ನಡೆ ಏನು? ವಿಜಯ್ ಅವರು ತಮಗೆ 112 ಶಾಸಕರ ಬೆಂಬಲವಿದೆ ಎಂದು ತಿಳಿಸಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಆದರೆ, ತಮಿಳುನಾಡಿನಲ್ಲಿ ಬಹುಮತ ಸಾಬೀತುಪಡಿಸಲು ಮತ್ತು ಸರ್ಕಾರ ರಚಿಸಲು ಕನಿಷ್ಠ 118 ಶಾಸಕರ ಬೆಂಬಲ ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ, ರಾಜ್ಯಪಾಲರು ವಿಜಯ್ ಅವರಿಗೆ 118 ಶಾಸಕರ ಬೆಂಬಲದೊಂದಿಗೆ ಬರುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಕಾನೂನು ಹೋರಾಟ ಅಥವಾ ಸಲಹೆ? ಸಂಖ್ಯಾಬಲದ ಕೊರತೆಯ ನಡುವೆಯೂ ಸರ್ಕಾರ ರಚನೆಯ ಹಕ್ಕು ಮಂಡಿಸಿರುವ ಹಿನ್ನೆಲೆಯಲ್ಲಿ, ರಾಜ್ಯಪಾಲರು ಈ ಬಗ್ಗೆ ತಜ್ಞರಿಂದ ಕಾನೂನು ಸಲಹೆ ಪಡೆಯಲು ಮುಂದಾಗಿದ್ದಾರೆ. ಸಂವಿಧಾನಾತ್ಮಕವಾಗಿ ಬಹುಮತದ ಕೊರತೆ ಇರುವಾಗ ಮುಂದಿನ ಕ್ರಮ ಏನು ಎಂಬ ಬಗ್ಗೆ ರಾಜ್ಯಪಾಲರು ಗಂಭೀರ ಚಿಂತನೆ ನಡೆಸುತ್ತಿದ್ದಾರೆ.
ಹೀಗಾಗಿ, ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಾಳೆ ನಡೆಯುವುದು ಬಹುತೇಕ ‘ಡೌಟ್’ ಎನ್ನಲಾಗುತ್ತಿದ್ದು, ಮುಂದಿನ ಬೆಳವಣಿಗೆಗಳು ಕುತೂಹಲ ಕೆರಳಿಸಿವೆ.








