ತುಮಕೂರು : ಭಕ್ತರಿಗೆ ತಿಳಿಸದೆ ಮಠದ ಜಮೀನನ್ನು ಮಾರಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ತುಮಕೂರು ತಾಲೂಕಿನ ಹೆಬ್ಬೂರು ಬಳಿಯಿರುವ ರಾಮೇನಹಳ್ಳಿ ಮಠದ ಶಿವಪಂಚಾಕ್ಷರಿ ಸ್ವಾಮೀಜಿ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದಾರೆ.
ಹೌದು ಮಠದ ಉಸ್ತುವಾರಿ ನೋಡಿಕೊಳ್ಳುತ್ತಿರುವುದು ಶಿವ ಪಂಚಾಕ್ಷರಿ ಸ್ವಾಮೀಜಿ. ಮಠದಲ್ಲಿ ಏನೇ ನಿರ್ಧಾರ ಮಾಡಬೇಕೆಂದರೂ ಮಠದ ಭಕ್ತರು , ಗ್ರಾಮಸ್ಥರಿಗೆ ಮಾಹಿತಿ ನೀಡಬೇಕು. ಆದರೆ ಸ್ವಾಮೀಜಿ ಗ್ರಾಮಸ್ಥರಿಗೆ ತಿಳಿಯದಂತೆ ಮಠಕ್ಕೆ ಸೇರಿದ ಹತ್ತಾರು ಎಕರೆ ಜಮೀನು ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ. ಇದನ್ನ ಪ್ರಶ್ನೆ ಮಾಡಿದ ಗ್ರಾಮಸ್ಥರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.
ಅಲ್ಲದೆ ಮಠದೊಳಗೆ ಸಹೋದರನ ಕುಟುಂಬಸ್ಥರು ಕರೆತಂದು ಇಟ್ಟುಕೊಂಡಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಯಾರನ್ನ ಕೇಳಿ ಮಠದ ಜಮೀನು ಮಾರಾಟ ಮಾಡಿದ್ದೀರಿ, ಯಾರನ್ನ ಕೇಳಿ ಕುಟುಂಬಸ್ಥರನ್ನು ಮಠದೊಳಗೆ ಕರೆತಂದಿದ್ದೀರಿ? ಇದೇನು ನಿಮ್ಮ ಸ್ವಂತ ಆಸ್ತಿಯೇನು ಎಂದು ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ.
ಇದರಿಂದ ಕೋಪಗೊಂಡು ಗ್ರಾಮಸ್ಥರ ವಿರುದ್ಧವೇ ಸ್ವಾಮೀಜಿ ಅವಾಚ್ಯವಾಗಿ ನಿಂದಿಸಿದ್ದಾರೆಂದು ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ವಿಷಯ ತಿಳಿದು ಕೂಡಲೇ ಘಟನಾ ಸ್ಥಳಕ್ಕೆ ಹೆಬ್ಬೂರು ಠಾಣೆಯ ಪೊಲೀಸರು ಬೇಟಿ ನೀಡಿದ್ದು ಗ್ರಾಮಸ್ಥರನ್ನು ಸಮಾಧಾನ ಪಡಿಸಿದ್ದು, ಘಟನೆಯ ಮಾಹಿತಿಯನ್ನು ಪಡೆದುಕೊಂಡು ವಿಚಾರಣೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.