ಜೆರುಸಲೆಮ್:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲೆ ಸಾಧಿಸಿರುವ ಸೇನಾ ಮೇಲುಗೈಯನ್ನು (Military Achievements) ಆ ದೇಶದೊಂದಿಗೆ ಹೊಸ ಮತ್ತು ಕಠಿಣವಾದ ಒಪ್ಪಂದ ಮಾಡಿಕೊಳ್ಳಲು ಒಂದು ‘ಅವಕಾಶ’ವಾಗಿ ಬಳಸಿಕೊಳ್ಳಲಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇರಾನ್ನ ಪರಮಾಣು ಮತ್ತು ಸೇನಾ ನೆಲೆಗಳ ಮೇಲೆ ನಡೆದ ಯಶಸ್ವಿ ಕಾರ್ಯಾಚರಣೆಗಳು ಇರಾನ್ ಅನ್ನು ದುರ್ಬಲಗೊಳಿಸಿವೆ. ಇದನ್ನೇ ಬಂಡವಾಳವಾಗಿಸಿಕೊಂಡು ಟ್ರಂಪ್ ಅವರು ಇರಾನ್ ಅನ್ನು ಮಾತುಕತೆಗೆ ಒಪ್ಪಿಸಲಿದ್ದಾರೆ ಎಂದು ನೆತನ್ಯಾಹು ವಿಶ್ಲೇಷಿಸಿದ್ದಾರೆ.
ಅಮೆರಿಕವು ಇರಾನ್ ವಿರುದ್ಧ ತಳೆದಿರುವ ಈ ಕಠಿಣ ನಿಲುವು ಇಸ್ರೇಲ್ನ ಭದ್ರತೆಗೆ ಪೂರಕವಾಗಿದೆ. ಶಕ್ತಿಯ ಪ್ರದರ್ಶನದ ಮೂಲಕವೇ ಇರಾನ್ನ ಪರಮಾಣು ಆಕಾಂಕ್ಷೆಗಳಿಗೆ ಬ್ರೇಕ್ ಹಾಕಲು ಸಾಧ್ಯ ಎಂಬುದು ನೆತನ್ಯಾಹು ಅವರ ವಾದವಾಗಿದೆ. ಈ ಹಿಂದೆ ಇದ್ದ ಸಡಿಲವಾದ ಒಪ್ಪಂದಗಳಿಗಿಂತ ಭಿನ್ನವಾಗಿ, ಈ ಬಾರಿ ಇರಾನ್ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವಂತಹ ಒಪ್ಪಂದಕ್ಕೆ ಟ್ರಂಪ್ ಒತ್ತು ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.








