ವಾಷಿಂಗ್‌ಟನ್:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಆಡಳಿತದಲ್ಲಿ ಅತಿದೊಡ್ಡ ಬದಲಾವಣೆ ಮಾಡಿದ್ದು, ಅಟಾರ್ನಿ ಜನರಲ್ ಸ್ಥಾನದಲ್ಲಿದ್ದ ಪಮ್ ಬೋಂಡಿ (Pam Bondi) ಅವರನ್ನು ಅಧಿಕಾರದಿಂದ ವಜಾಗೊಳಿಸಿದ್ದಾರೆ. ಅವರ ಜಾಗಕ್ಕೆ ತಮ್ಮ ದೀರ್ಘಕಾಲದ ನಂಬಿಕಸ್ತ ಮತ್ತು ವೈಯಕ್ತಿಕ ವಕೀಲರನ್ನು ನೇಮಿಸುವ ಮೂಲಕ ಟ್ರಂಪ್ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.
ಪಮ್ ಬೋಂಡಿ ಅವರು ಟ್ರಂಪ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರೂ, ಈಗ ಅವರನ್ನು ದಿಢೀರನೆ ಹುದ್ದೆಯಿಂದ ಕೆಳಗಿಳಿಸಿರುವುದು ಅಮೆರಿಕದ ಕಾನೂನು ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.ಟ್ರಂಪ್ ಅವರ ಅನೇಕ ಖಾಸಗಿ ಮತ್ತು ಕಾನೂನು ಹೋರಾಟಗಳಲ್ಲಿ ಭಾಗಿಯಾಗಿದ್ದ ಅವರ ಮಾಜಿ ವೈಯಕ್ತಿಕ ವಕೀಲರಿಗೆ ಈಗ ದೇಶದ ಅತ್ಯುನ್ನತ ಕಾನೂನು ಅಧಿಕಾರಿಯ ಪಟ್ಟ ನೀಡಲಾಗಿದೆ. ಇದು ನ್ಯಾಯಾಂಗದ ಸ್ವತಂತ್ರದ ಕುರಿತು ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.
ಆಡಳಿತದ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಮತ್ತು ತಮಗೆ ನಿಷ್ಠರಾಗಿರುವವರನ್ನು ಪ್ರಮುಖ ಸ್ಥಾನಗಳಲ್ಲಿ ಕೂರಿಸಲು ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.ಟ್ರಂಪ್ ಅವರು ನ್ಯಾಯಾಂಗ ಇಲಾಖೆಯನ್ನು ತಮ್ಮ ಸ್ವಂತ ಆಸ್ತಿಯಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಡೆಮೋಕ್ರಾಟ್ ಪಕ್ಷದ ನಾಯಕರು ತೀವ್ರವಾಗಿ ಟೀಕಿಸಿದ್ದಾರೆ.








