ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಮಾತುಕತೆಗಳು ಯಾವುದೇ ಫಲಿತಾಂಶ ನೀಡದೆ ಸ್ಥಗಿತಗೊಂಡ ಬೆನ್ನಲ್ಲೇ, ವಿಶ್ವದ ಪ್ರಮುಖ ತೈಲ ಸಾರಿಗೆ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಸಂಪೂರ್ಣವಾಗಿ ದಿಗ್ಬಂಧನ ಮಾಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಲ್ಲಿನ ನೌಕಾಪಡೆಗೆ ಆದೇಶಿಸಿದ್ದಾರೆ.
ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಸುದೀರ್ಘ 21 ಗಂಟೆಗಳ ಮಾತುಕತೆಯಲ್ಲಿ ಇರಾನ್ ತನ್ನ ಪರಮಾಣು ಕಾರ್ಯಕ್ರಮಗಳನ್ನು ಕೈಬಿಡಲು ನಿರಾಕರಿಸಿದ್ದರಿಂದ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಇರಾನ್ ಬಂದರುಗಳಿಗೆ ಹೋಗುವ ಅಥವಾ ಅಲ್ಲಿಂದ ಹೊರಬರುವ ಎಲ್ಲಾ ಹಡಗುಗಳನ್ನು ತಡೆಯಲು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಪಡೆಗಳಿಗೆ ಸೂಚನೆ ನೀಡಲಾಗಿದೆ.
“ಇರಾನ್ ಜಗತ್ತನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದೆ, ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ನಮ್ಮ ಹಡಗುಗಳ ಮೇಲೆ ದಾಳಿ ನಡೆದರೆ ತಕ್ಕ ಪ್ರತ್ಯುತ್ತರ ನೀಡಲಾಗುವುದು” ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಸಿದ್ದಾರೆ.
ವಿಶ್ವದ ಒಟ್ಟು ತೈಲ ಪೂರೈಕೆಯ ಸುಮಾರು ಶೇ. 20ರಷ್ಟು ಈ ಜಲಸಂಧಿಯ ಮೂಲಕವೇ ಸಾಗುವುದರಿಂದ, ಈ ದಿಗ್ಬಂಧನವು ಜಾಗತಿಕವಾಗಿ ತೈಲ ಬೆಲೆ ಏರಿಕೆಗೆ ಮತ್ತು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುವ ಭೀತಿ ಎದುರಾಗಿದೆ.
ಅಮೆರಿಕದ ಈ ನಡೆಯನ್ನು ಇರಾನ್ ತೀವ್ರವಾಗಿ ಖಂಡಿಸಿದ್ದು, ಜಲಸಂಧಿಯು ತನ್ನ ಸಂಪೂರ್ಣ ನಿಯಂತ್ರಣದಲ್ಲಿದೆ ಮತ್ತು ಯಾವುದೇ ಶತ್ರು ಹಡಗು ಪ್ರವೇಶಿಸಿದರೆ ಅಪಾಯ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.








