ಬೆಂಗಳೂರು: ರಾಜ್ಯದ ಸಾರಿಗೆ ಇಲಾಖೆಯಲ್ಲಿ ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ಆಡಳಿತ ಇಲಾಖೆಯವರ ಪ್ರವೇಶ ಮತ್ತು ಭ್ರಷ್ಟಾಚಾರ ವಿಚಾರವಾಗಿ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ಇಲಾಖೆಯ ಕಾರ್ಯದರ್ಶಿಗೆ ತನಿಖೆ ನಡೆಸಿ, ವರದಿ ನೀಡುವಂತೆ ಸೂಚಿಸಿದ್ದಾರೆ.
ಈ ಕುರಿತಂತೆ ಟಿಪ್ಪಣಿ ಹೊರಡಿಸಿರುವಂತ ಅವರು, ಸಾರಿಗೆ ಇಲಾಖೆಯಲ್ಲಿನ ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ಆಡಳಿತ ವಿಭಾಗದ ಹುದ್ದೆಗಳಲ್ಲಿರುವವರು ಮುಂಬಡ್ತಿ ಪಡೆಯಲು ಅಸ್ತಿತ್ವದಲ್ಲೇ ಇಲ್ಲದ ಕಾಲೇಜುಗಳ ಹೆಸರಿನಲ್ಲಿ ರೂ. 10 ರಿಂದ 15 ಸಾವಿರ ಗಳಿಗೆ ನಕಲಿ ಅಂಕಪಟ್ಟಿ ಪಡೆದು ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ಪ್ರಮಾಣ ಪತ್ರಗಳನ್ನು ಸಲ್ಲಿಸಿ, ಹಲವಾರು ಹುದ್ದೆ ಗಿಟ್ಟಿಸಿಕೊಂಡಿದ್ದು ಬಡ್ತಿಯಲ್ಲಿ ಭ್ರಷ್ಟಾಚಾರವಾಗಿದೆ ಎಂದು ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತದೆ ಎಂದಿದ್ದಾರೆ.
ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021, ದಿನಾಂಕ 12- 10-2022 ರ ಕರ್ನಾಟಕ ರಾಜ್ಯಪತ್ರ No. SARIE 40 SAESE 2021(P-1) ರನ್ವಯ ಶೇಕಡ 95 ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ, ಶೇಕಡ 5 ರಷ್ಟು ಹುದ್ದೆಗಳನ್ನು ಮಾತ್ರ ಬಡ್ತಿ ಮೂಲಕ ತುಂಬಲು ತಿಳಿಸಿದ್ದು, ಶೇಕಡ 5ಕ್ಕೆ ಮೀರದಂತೆ ಬಡ್ತಿ ನೀಡಲಾಗಿದೆಯೇ ಹಾಗೂ 2022 ರಿಂದ ಎಷ್ಟು ಮಂದಿಗೆ ಬಡ್ತಿ ನೀಡಲಾಗಿದೆ ಮತ್ತು ಈ ರೀತಿ ಬಡ್ತಿ ಪಡೆದ ಸಿಬ್ಬಂದಿಗಳ ವಿದ್ಯಾರ್ಹತೆಯ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಶಿಕ್ಷಣ ಇಲಾಖೆ/ ಪಾಲಿಟೆಕ್ನಿಕ್ ಸಂಸ್ಥೆಗಳಿಗೆ ಕಳುಹಿಸಿ ನೈಜತೆಯನ್ನು ಪರಿಶೀಲಿಸಲಾಗಿದೆಯೇ ಎಂಬುದರ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದಾರೆ.
ಮುಂದುವರೆದು, ಈ ರೀತಿ ಬಡ್ತಿ ನೀಡಿರುವಂತಹ ಪ್ರಕರಣಗಳಲ್ಲಿ ಯಾವುದಾದರೂ ಲೋಪ- ದೋಷವಾಗಿದ್ದರೆ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಶಿಸ್ತಿನ ಕ್ರಮ ಜರುಗಿಸುವ ಸಂಬಂಧ ಸಮಗ್ರ ವರದಿಯನ್ನು 15 ದಿನಗಳೊಳಗಾಗಿ ಸಲ್ಲಿಸಲು ಈ ಮೂಲಕ ಸೂಚಿಸಿದ್ದಾರೆ.
‘ಚಿತ್ರದುರ್ಗ ಜಿಲ್ಲಾ ಪೊಲೀಸ’ರ ಭರ್ಜರಿ ಬೇಟೆ: ಇಸ್ಪಿಟ್ ಜೂಜಾಟ ಸಂಬಂಧ ‘154 ಕೇಸ್’ ದಾಖಲು, 10.80 ಲಕ್ಷ ಜಪ್ತಿ