ಬೆಂಗಳೂರು: ರಾಜ್ಯ ಸರ್ಕಾರದಿಂದ 66 ಪೌರಾಯುಕ್ತರನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಆದರೆ ಶಾಕಿಂಗ್ ಎನ್ನುವಂತೆ ಕೇವಲ ಒಂದು ದಿನದ ಮಟ್ಟಿಗೆ 50 ಪೌರಾಯುಕ್ತರನ್ನು ವರ್ಗಾವಣೆ ಮಾಡಿದೆ. ಆ ಬಳಿಕ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವಂತ ಹುದ್ದೆಯಲ್ಲೇ ಮುಂದುವರೆಸುವಂತೆ ಆದೇಶಿಸಿದೆ. ಈ ರೀತಿಯಾಗಿ ಒಂದು ದಿನದ ಮಟ್ಟಿಗೆ ಪೌರಾಯುಕ್ತರನ್ನು ವರ್ಗಾವಣೆ ಮಾಡಿರುವುದು ಹಲವು ಅನುಮಾನ, ಗೊಂದಲಕ್ಕೂ ಕಾರಣವಾಗಿದೆ.
ಈ ಕುರಿತಂತೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ್ ಎಂಬುವರು ಅಧಿಸೂಚನೆ ಹೊರಡಿಸಿದ್ದಾರೆ. ಕರ್ನಾಟಕ ಪೌರಾಡಳಿತ ಸೇವೆಗೆ ಸೇರಿದ ಈ ಕೆಳಕಂಡ ಅಧಿಕಾರಿಗಳಿಗೆ ಮುಖ್ಯಾಧಿಕಾರಿ ಶ್ರೇಣಿ-1 (ವೇತನ ಶ್ರೇಣಿ ರೂ. 65950-124900) ವೃಂದದಿಂದ ಪೌರಾಯುಕ್ತರು ಶ್ರೇಣಿ-2 (ವೇತನ ಶ್ರೇಣಿ ರೂ.83700-155200) ವೃಂದಕ್ಕೆ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1958ರ ನಿಯಮ 42ರಡಿ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಾನಪನ್ನ ಆಧಾರದ ಮೇಲೆ ಮುಂಬಡ್ತಿ ನೀಡಿ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದ್ದಾರೆ.
ಮುಂದುವರೆದು, ಮುಖ್ಯಾಧಿಕಾರಿ ಶ್ರೇಣಿ-1 (ವೇತನ ಶ್ರೇಣಿ ರೂ. 65950-124900) ವೃಂದದಿಂದ ಪೌರಾಯುಕ್ತರು ಶ್ರೇಣಿ-2 (ವೇತನ ಶ್ರೇಣಿ ರೂ.83700-155200) ವೃಂದಕ್ಕೆ ಸ್ಥಾನವನ್ನು ಮುಂಬಡ್ತಿ ನೀಡಿ ಅವರುಗಳ ಹೆಸರುಗಳ ಮುಂದೆ ನಮೂದಿಸಿರುವ ಹುದ್ದೆಗಳಿಗೆ ಕಾರ್ಯವರದಿ ಮಾಡಿಕೊಳ್ಳತಕ್ಕದ್ದು ಎಂದಿದ್ದಾರೆ.
ಈ ಆದೇಶದಲ್ಲಿ ಶಾಕಿಂಗ್ ಎನ್ನುವಂತೆ ಒಂದು ದಿನದ ಮಟ್ಟಿಗೆ ಪೌರಾಯುಕ್ತರ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿದೆ. ತದನಂತರ ಹಾಲಿ ಕಾರ್ಯನಿರ್ವಹಿಸುತ್ತಿರುವ ಹುದ್ದೆಯಲ್ಲಿ ಮುಂದುವರೆಸಿದೆ ಎಂಬುದಾಗಿ ಸ್ಥಾನ ಪನ್ನ ಮುಂಬಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸಲಾದ ಹುದ್ದೆಯಲ್ಲಿ ತಿಳಿಸಲಾಗಿದೆ.
ದಾವಣಗೆರೆ ಮಹಾನಗರ ಪಾಲಿಕೆ ಕಂದಾಯ ಅಧಿಕಾರಿ ಈರಮ್ಮ.ವಿ ಅವರನ್ನು ಒಂದು ದಿನದ ಮಟ್ಟಿಗೆ ಹಿರಿಯೂರು ನಗರಸಭೆಯ ಪೌರಾಯುಕ್ತರ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿದೆ. ತದನಂದರ ಅವರ ಸೇವೆಯನ್ನು ದಾವಣಗೆರೆ ಮಹಾನಗರ ಪಾಲಿಕೆ ವಶಕ್ಕೆ ನೀಡಿದೆ ಎಂದಿದ್ದಾರೆ.
ಇನ್ನೂ ಉಡುಪಿ ಜಿಲ್ಲೆಯ ಯೋಜನಾ ನಿರ್ದೇಶಕರ ಕಚೇರಿಯ ಜಿಲ್ಲಾ ನಗರ ವ್ಯವಸ್ಥಾಪಕರಾಗಿದ್ದಂತ ಧನಂಜಯ ಡಿ.ಬಿ ಅವರನ್ನು ಒಂದು ದಿನದ ಮಟ್ಟಿಗೆ ಸಾಗರ ನಗರಸಭೆಯ ಪೌರಾಯುಕ್ತರ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿದೆ. ತದನಂತರ ಹಾಲಿ ಕಾರ್ಯನಿರ್ವಹಿಸುತ್ತಿರುವ ಹುದ್ದೆಯಲ್ಲಿ ಮುಂದುವರೆಸಿದೆ ಎಂಬುದಾಗಿ ಆದೇಶದಲ್ಲಿ ತಿಳಿಸಿದ್ದಾರೆ.
ರಾಮನಗರ ಜಿಲ್ಲೆಯ ಬಿಡದಿ ಪುರಸಭೆಯ ಮುಖ್ಯಾಧಿಕಾರಿಯಾಗಿದ್ದಂತ ರಮೇಶ್ ಕೆ.ಜಿ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರಸಭೆಯ ಪೌರಾಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಆದರೇ ಇದೇ ಮಾದರಿಯಲ್ಲಿ 16 ಮಂದಿಯನ್ನು ಮಾತ್ರವೇ ವರ್ಗಾವಣೆ ಮಾಡಿದ್ದರೇ, ಇನ್ನುಳಿದಂತೆ ಪೌರಾಡಳಿತ ಇಲಾಖೆಯಿಂದ ಮಾಡಿದಂತ ವರ್ಗಾವಣೆ ಆದೇಶವು ಕೇವಲ ಒಂದು ದಿನದ ಮಟ್ಟಿಗೆ ಆಗಿದೆ.
ಅಂದಹಾಗೇ ಇದು ವರ್ಗಾವಣೆಯೋ ಅಥವಾ ಹಾಗೆ ಹೋಗಿ, ಹೀಗೆ ಬಾ ಎನ್ನುವಂತೆ ಅತ್ತೆಮನೆಗೆ ಕಳುಹಿಸಿಕೊಟ್ಟಂತ ಆದೇಶವೋ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ವರ್ಗಾವಣೆಯಾಗಲೀ, ಮುಂಬಡ್ತಿಯಾಗಲೀ ಇಂತಿಷ್ಟು ವರ್ಷಗಳವರೆಗೆ ವರ್ಗಾವಣೆಗೊಂಡ ಸ್ಥಳದಲ್ಲಿ ಕಾರ್ಯನಿರ್ವಹಿಸುವಂತಿರುವುದು ಸರ್ಕಾರದ ವರ್ಗಾವಣೆಯ ಮಾರ್ಗಸೂಚಿಯ ನಿಯಮವಾಗಿದೆ. ಆದರೇ 66 ಪೌರಾಯುಕ್ತರ ವರ್ಗಾವಣೆಯಲ್ಲಿ 16 ಮಂದಿಯನ್ನು ಮಾತ್ರವೇ ಖಾಯಂ ವರ್ಗಾವಣೆ ಮಾಡಿದ್ದರೇ, ಇನ್ನುಳಿದಂತ 50 ಪೌರಾಯುಕ್ತರನ್ನು ಕೇವಲ ಒಂದು ದಿನದ ಮಟ್ಟಿಗೆ ಮಾತ್ರವೇ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಆ ಬಳಿಕ ಹಾಲಿ ಹುದ್ದೆಯಲ್ಲೇ ಮುಂದುವರೆಸಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು