ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ಮುರಗಮಲ್ಲಾದಲ್ಲಿ ಮೃತ್ಯು ದರ್ಶನವಾಗಿದೆ. ಕೆರೆಯಲ್ಲಿ ಮುಳುಗುತ್ತಿದ್ದ ತನ್ನ ಮಕ್ಕಳನ್ನು ಪ್ರಾಣದ ಹಂಗು ತೊರೆದು ರಕ್ಷಿಸಲು ಹೋದ ತಾಯಿಯೋರ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಅತ್ಯಂತ ಹೃದಯವಿದ್ರಾವಕ ಘಟನೆ ನಡೆದಿದೆ. ಬೆಂಗಳೂರಿನ ಬನಶಂಕರಿ ನಿವಾಸಿ ತಬುಸುಮ್ ಖಾನ್ (24) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಬೆಂಗಳೂರಿನಿಂದ ಕುಟುಂಬ ಸಮೇತ ಮುರಗಮಲ್ಲಾದ ದರ್ಗಾಕ್ಕೆ ಭೇಟಿ ನೀಡಲು ಈ ತಂಡ ಆಗಮಿಸಿತ್ತು. ದರ್ಶನದ ನಂತರ ಎಲ್ಲರೂ ಸೇರಿ ಹತ್ತಿರದಲ್ಲೇ ಇರುವ ಕೆರೆಯ ಬಳಿ ವಿಶ್ರಾಂತಿ ಪಡೆಯಲು ತೆರಳಿದ್ದರು. ಈ ಸಂದರ್ಭದಲ್ಲಿ ಕುಟುಂಬಸ್ಥರು ಕೆರೆಯ ದಡದಲ್ಲಿ ಕಾಲ ಕಳೆಯುತ್ತಿದ್ದರು. ಸ್ವಲ್ಪ ದೂರದಲ್ಲಿದ್ದ ಬಟ್ಟೆಯನ್ನು ತರಲೆಂದು ತಾಯಿ ತಬುಸುಮ್ ಖಾನ್ ಅವರು ತೆರಳಿದ್ದಾಗ, ಮಕ್ಕಳು ಕೆರೆಯ ನೀರಿನಲ್ಲಿ ಆಟವಾಡಲು ಹತ್ತಿರ ಹೋಗಿದ್ದಾರೆ.
ಮಕ್ಕಳನ್ನು ಉಳಿಸಲು ಹೋದ ತಾಯಿ: ಮಕ್ಕಳು ಆಟವಾಡುತ್ತಾ ಆಳವಾದ ಪ್ರದೇಶಕ್ಕೆ ಹೋದಾಗ ನೀರಿನಲ್ಲಿ ಮುಳುಗಲು ಪ್ರಾರಂಭಿಸಿದ್ದಾರೆ. ಇದನ್ನು ಕಂಡ ತಾಯಿ ತಬುಸುಮ್ ಅವರು ಕ್ಷಣಾರ್ಧದಲ್ಲಿ ಧಾವಿಸಿ ಬಂದು, ಮಕ್ಕಳನ್ನು ರಕ್ಷಿಸಲು ತಾವೂ ಕೂಡ ಕೆರೆಗೆ ದುಮುಕಿದ್ದಾರೆ. ಮಕ್ಕಳನ್ನು ಹೇಗೋ ಮಾಡಿ ಸುರಕ್ಷಿತವಾಗಿ ದಡಕ್ಕೆ ತಳ್ಳುವಲ್ಲಿ ಯಶಸ್ವಿಯಾದರಾದರೂ, ತಮಗೆ ಈಜು ಬಾರದ ಕಾರಣ ತಾವೇ ಆಳವಾದ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ.
ಕಣ್ಣೆದುರೇ ಕೊನೆಯುಸಿರೆಳೆದ ದುರ್ದೈವಿ: ತಾಯಿ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಸ್ಥಳದಲ್ಲಿದ್ದವರು ಸಹಾಯಕ್ಕೆ ಧಾವಿಸುವಷ್ಟರಲ್ಲಿ ಅವರು ನೀರಿನಲ್ಲಿ ಕಣ್ಮರೆಯಾಗಿದ್ದರು. ತಕ್ಷಣವೇ ಕಾರ್ಯಾಚರಣೆ ನಡೆಸಿ ಅವರನ್ನು ನೀರಿನಿಂದ ಹೊರತೆಗೆಯಲಾಯಿತಾದರೂ, ತೀವ್ರವಾಗಿ ನೀರು ಕುಡಿದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮಕ್ಕಳ ಪ್ರಾಣ ಉಳಿಸಿದ ತಾಯಿ, ಅವರ ಕಣ್ಣೆದುರೇ ಮಸಣ ಸೇರಿರುವುದು ಕುಟುಂಬಸ್ಥರ ಆಕ್ರಂದನಕ್ಕೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಚಿಂತಾಮಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.








