ಬೀದರ್ : ಆಡುಗಳನ್ನು ಕಟ್ಟಿದ್ದ ಕೊಟ್ಟಿಗೆಗೆ ಬೆಂಕಿ ತಗುಲಿದ ಪರಿಣಾಮವಾಗಿ ಕೊಟ್ಟಿಗೆಯಲ್ಲಿದ್ದ 45 ಆಡು ಹಾಗೂ ಓರ್ವ ವ್ಯಕ್ತಿ ಸಜೀವ ದಹನವಾದ ಹೃದಯವಿದ್ರಾವಕ ಘಟನೆ ತಾಲೂಕಿನ ಬೋರಾಳ್ ಗ್ರಾಮದಲ್ಲಿ ಮಂಗಳವಾರ ಸಾಯಂಕಾಲ ನಡೆದಿದೆ.
ಬೋರಾಳ್ ಗ್ರಾಮದ ನಿವಾಸಿ ಶಂಕರ್ ಮೇತ್ರೆ (62) ಮೃತ ವ್ಯಕ್ತಿ. ಶಂಕರ್ ಮೇತ್ರೆ ಅವರು ಗ್ರಾಮದ ಹೊರ ವಲಯದಲ್ಲಿರುವ ಜಮೀನಿನಲ್ಲಿ ಶೆಡ್ ಹಾಕಿಕೊಂಡು ಆಡುಗಳ ಸಾಕಾಣಿಕೆ ಮಾಡುತ್ತಿದ್ದರು. ಎಂದಿನಂತೆ ಆಡುಗಳನ್ನು ಮೇಯಿಸಿಕೊಂಡು ಬಂದು ಕೊಟ್ಟಿಗೆ ಒಳಗಡೆ ಹಾಕಿ ತಾವು ಕೂಡ ಅಲ್ಲೇ ಮಲಗಿದ್ದರು.
ಮಂಗಳವಾರ ಸಾಯಂಕಾಲ ಸುಮಾರು 7 ಗಂಟೆಗೆ ಮೇಕೆ ಶೆಡ್ಗೆ ಆಕಸ್ಮಿಕ ಬೆಂಕಿ ತಗುಲಿ ಈ ದುರ್ಘಟನೆ ಸಂಭವಿಸಿದ್ದು ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಕುರಿತು ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.








