ಬಳ್ಳಾರಿ : ಬಳ್ಳಾರಿಯಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು ಕಂಪ್ಲಿ ಕೋಟೆಯ ತುಂಗಭದ್ರಾ ನದಿ ಸೇತುವೆ ಬಳಿ ಕಬ್ಬಿಣದ ಸ್ವಾಗತ ಕಮಾನು ಅಳವಡಿಸುತ್ತಿದ್ದ ಸಂದರ್ಭದಲ್ಲಿ ಸಿಂಗಲ್ ಚೈನ್ ತುಂಡಾಗಿ ಕೆಳಗೆ ಬಿದ್ದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.ಕಂಪ್ಲಿಯ 4ನೇ ವಾರ್ಡ್ ನಿವಾಸಿ ವೆಲ್ಡಿಂಗ್ ಲೇಬರ್ ಶೇಕ್ಷಾವಲಿ (35) ಮೃತಪಟ್ಟ ದುರ್ದೈವಿ.
ತುಂಗಭದ್ರಾ ನದಿ ಸೇತುವೆ ಹತ್ತಿರದಲ್ಲಿರುವ ಸ್ವಾಗತ ಕಮಾನು ನವೀಕರಣ ಕಾರ್ಯ ನಡೆದಿದೆ. ಮಧ್ಯಾಹ್ನದ ಸಮಯದಲ್ಲಿ ಕ್ರೇನ್ನಿಂದ ಚೈನಿನ ಮೂಲಕ ಕಮಾನನ್ನು ಮೇಲೆತ್ತಿ ಕೂರಿಸುವ ವೇಳೆ ಚೈನ್ ಕಟ್ಟಾಗಿ ಕಮಾನು ಕೆಳಗೆ ಬಿದ್ದಿದೆ. ಕೆಳಗೆ ನಿಂತಿದ್ದ ಶೇಕ್ಷಾವಲಿ ಮೇಲೆ ಕಮಾನು ಬಿದ್ದ ಪರಿಣಾಮ ತಲೆಗೆ ಬಲವಾದ ಪೆಟ್ಟಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಆತ ಸಾವನ್ನಪ್ಪಿದ್ದಾನೆ.
ಗಂಭೀರವಾಗಿ ಗಾಯಗೊಂಡಿರುವ ಇನಾಯತ್‌ಗೆ ಗಂಗಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕರೀಂ ಎಂಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಂಪ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಟೆಂಡರ್ ಆದೇಶವಿಲ್ಲದೇ ಕಮಾನಿನ ನವೀಕರಣ ಕಾರ್ಯ ನಡೆದಿದೆ ಎನ್ನಲಾಗುತ್ತಿದೆ. ಈ ಘಟನೆಗೆ ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿ ಕಾರಣ ಎಂಬ ಆರೋಪವೂ ಕೇಳಿ ಬಂದಿದೆ.








