ಬೆಂಗಳೂರು: ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ನಾಲ್ಕು ಉತ್ಪನ್ನಗಳ ವಹಿವಾಟನ್ನು ದಾಸನಪುರ ಉಪ ಮಾರುಕಟ್ಟೆಗೆ ಸ್ಥಳಾಂತರ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ವಿಧಾನಪರಿಷತ್ತಿಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಎಂ.ನಾಗರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಮತ್ತು ಶುಂಠಿಯನ್ನು ಯಶವಂತಪುರ ಮುಖ್ಯ ಮಾರುಕಟ್ಟೆ ಪ್ರಾಂಗಣದಿಂದ ದಾಸನಪುರ ಉಪ ಮಾರುಕಟ್ಟೆಗೆ ಸ್ಥಳಾಂತರ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ನಾಲ್ಕು ಉತ್ಪನ್ನಗಳನ್ನು ದಾಸನಪುರ ಉಪ ಮಾರುಕಟ್ಟೆಗೆ ಸ್ಥಳಾಂತರ ಮಾಡಿರುವ ಸರ್ಕಾರದ ಕ್ರಮವನ್ನು ಕೆಲವು ವರ್ತಕರು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದರು.
ನ್ಯಾಯಾಲಯ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದ್ದು, ಸರ್ಕಾರ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಮತ್ತು ಶುಂಠಿ ವರ್ತಕರಿಗೆ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಮಳಿಗೆ ಹಂಚಿಕೆ ಮಾಡಲಿದೆ ಎಂದು ತಿಳಿಸಿದರು.
ಯಶವಂತಪುರ ಎಪಿಎಂಸಿಯಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಣ ಹಾಗೂ ರೈತರ ಹಿತದೃಷ್ಟಿಯಿಂದ ದಾಸನಪುರದಲ್ಲಿ 67.25 ಎಕರೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಲಾಗಿದೆ. ಈ ಪ್ರದೇಶದಲ್ಲಿ ರೂ 306.50 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಮಾರುಕಟ್ಟೆ ಅಭಿವೃದ್ಧಿಪಡಿಸಲಾಗಿದೆ. ಎಪಿಎಂಸಿಗಳನ್ನು ಹೊರತುಪಡಿಸಿ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಕಾಯ್ದೆ ಅಡಿ ವಿವಿಧ ಅವಕಾಶ ಕಲ್ಪಿಸಿ 4 ಖಾಸಗಿ ಮಾರುಕಟ್ಟೆ ಹಾಘೂ 65 ನೇರ ಖರೀದಿ ಕೇಂದ್ರಗಳನ್ನು ನಡೆಸಲು ಲೈಸೆನ್ಸ್ ನೀಡಲಾಗಿದೆ ಎಂದರು.
BREAKING : ಮಾ.22 ರಂದು ‘ಅಖಂಡ ಕರ್ನಾಟಕ ಬಂದ್’ : ವಾಟಾಳ್ ನಾಗರಾಜ್ ಅಧಿಕೃತ ಘೋಷಣೆ