ಬೆಂಗಳೂರು: ಸುಮಾರು ನಾಲ್ಕು ವರ್ಷಗಳ ಸುದೀರ್ಘ ವಿರಾಮದ ನಂತರ ಸಿಲಿಕಾನ್ ಸಿಟಿಯಲ್ಲಿ ಮತ್ತೆ ಟೋಯಿಂಗ್ ಕಾರ್ಯಾಚರಣೆ ಚುರುಕುಗೊಂಡಿದೆ. ಪುನರಾರಂಭಗೊಂಡ ಕೇವಲ ಒಂದು ತಿಂಗಳ ಅವಧಿಯಲ್ಲಿ ಸಂಚಾರಿ ಪೊಲೀಸರು ಬರೋಬ್ಬರಿ 600ಕ್ಕೂ ಹೆಚ್ಚು ವಾಹನಗಳನ್ನು ಟೋಯಿಂಗ್ ಮಾಡುವ ಮೂಲಕ ನಿಯಮ ಉಲ್ಲಂಘಿಸಿದವರಿಗೆ ಬಿಸಿ ಮುಟ್ಟಿಸಿದ್ದಾರೆ.
ಸದ್ಯಕ್ಕೆ ನಗರದ ಮೂರು ಪ್ರಮುಖ ವಲಯಗಳ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ. ಶೀಘ್ರದಲ್ಲೇ ಉಳಿದ ಎರಡು ವಲಯಗಳಿಗೂ ಇದು ವಿಸ್ತರಣೆಯಾಗಲಿದೆ. ಪ್ರತಿದಿನ ಸರಾಸರಿ 60 ರಿಂದ 70 ವಾಹನಗಳನ್ನು ಟೋಯಿಂಗ್ ಮಾಡಲಾಗುತ್ತಿದೆ.ಬೆಂಗಳೂರು ಸಂಚಾರಿ ಪೊಲೀಸರು ಮತ್ತು ಜಿಬಿಎ (GBA) ಸಿಬ್ಬಂದಿ ಜಂಟಿಯಾಗಿ ಈ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಯಾವ ವಾಹನಗಳಿಗೆ ಟೋಯಿಂಗ್ ಭೀತಿ?
ಮುಖ್ಯ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಯುಂಟುಮಾಡುವ ವಾಹನಗಳ ಮೇಲೆ ವಿಶೇಷ ನಿಗಾ ಇಡಲಾಗಿದ್ದು, ಈ ಕೆಳಗಿನ ತಪ್ಪುಗಳಿಗೆ ದಂಡ ವಿಧಿಸಲಾಗುತ್ತಿದೆ.
ನೋ ಪಾರ್ಕಿಂಗ್ (No Parking): ನಿಷೇಧಿತ ಸ್ಥಳಗಳಲ್ಲಿ ನಿಲ್ಲಿಸಿರುವ ವಾಹನಗಳು.
ಅಡ್ಡಾದಿಡ್ಡಿ ಪಾರ್ಕಿಂಗ್: ಫುಟ್ಪಾತ್ ಅಥವಾ ರಸ್ತೆಯ ಮಧ್ಯೆ ಅಸ್ತವ್ಯಸ್ತವಾಗಿ ನಿಲ್ಲಿಸಿರುವ ವಾಹನಗಳು.
ಗಮನಿಸಿ: ಸದ್ಯದ ಕಾರ್ಯಾಚರಣೆಯಲ್ಲಿ ಯಾವುದೇ ತಾಂತ್ರಿಕ ಅಡಚಣೆಗಳು ಎದುರಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು ದಂಡ ಮತ್ತು ಟೋಯಿಂಗ್ ಕಿರಿಕಿರಿ ತಪ್ಪಿಸಲು ನಿಗದಿತ ಪಾರ್ಕಿಂಗ್ ಸ್ಥಳಗಳನ್ನೇ ಬಳಸುವಂತೆ ಸೂಚಿಸಲಾಗಿದೆ.








