ಬೆಂಗಳೂರು: ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ಸೌಲಭ್ಯ ಒದಗಿಸುವ ಸಂಬಂಧ ರಾಜ್ಯ ಸರಕಾರದ ಹೊರಡಿಸಿದ್ದ ಅಧಿಸೂಚನೆಗೆ ಇಂದು ಬೆಳಗ್ಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ಹಿಂಪಡೆದಿದೆ.
ತಡೆಯಾಜ್ಞೆ ಹಿಂಪಡೆಯುವಂತೆ ರಾಜ್ಯ ಸರಕಾರ ಮಾಡಿದ ಮನವಿಯನ್ನು ಪರಿಗಣಿಸಿ ಸರಕಾರ ಆದೇಶವನ್ನು ಮಾರ್ಪಾಡು ಮಾಡಿದೆ. ತಡೆಯಾಜ್ಞೆ ನೀಡಿದ ಕೆಲವೇ ಗಂಟೆಗಳ ಬಳಿಕ ಹೈಕೋರ್ಟ್ ತನ್ನ ಆದೇಶವನ್ನು ಹಿಂಪಡೆದಿದ್ದು, ಬಳಿಕ ಡಿಸೆಂಬರ್ 9 ರಂದು ವಿಚಾರಣೆ ಮುಂದೂಡಿದೆ.
ಇಂದು ಬೆಳಿಗ್ಗೆ ಋತುಚಕ್ರ ರಜೆಗೆ ಸಂಬಂಧಿಸಿದ ರಾಜ್ಯ ಸರ್ಕಾರದ ಆದೇಶಕ್ಕೆ ಇದೀಗ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಹೈಕೋರ್ಟ್ ಪೀಠದಿಂದ ತಡೆಯಾಜ್ಜೆ ನೀಡಲಾಗಿತ್ತು. ನವೆಂಬರ್ 20ರಂದು 1 ದಿನದ ಋತು ಚಕ್ರ ರಜೆ ಸಂಬಂಧ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶ ಪ್ರಶ್ನಿಸಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.
ವಿಚಾರಣೆಯ ವೇಳೆ ಕಾಯ್ದೆಯಲ್ಲಿ ಇಲ್ಲದ ನಿಯಮವನ್ನು ಸರ್ಕಾರಿ ಆದೇಶದ ಮೂಲಕ ಜಾರಿಗೊಳಿಸಲಾಗಿದೆ. ಸರ್ಕಾರದ ಏಕಪಕ್ಷ ಆದೇಶದಿಂದ ಹೋಟೆಲ್ ಗಳಿಗೆ ಸಮಸ್ಯೆ ಆಗಿದೆ ಎಂದು ಅಸೋಸಿಯೇಷನ್ ಪರ ವಕೀಲರು ವಾದಿಸಿದರು. ಆದೇಶಕ್ಕೆ ಮುನ್ನ ಸಂಘಟನೆಗಳ ಅಭಿಪ್ರಾಯ ಪಡೆಯಲಾಗಿದೆಯ? ಎಂದು ಜಡ್ಜ್ ಪ್ರಶ್ನಿಸಿದರು.
ಈ ವೇಳೆ ಅಸೋಸಿಯೇಷನ್ ಪರ ವಕೀಲರು ಇಲ್ಲ ಎಂದು ಉತ್ತರಿಸಿದರು. ಬಳಿಕ ಹೈಕೋರ್ಟ್ ಮುಂದಿನ ವಿಚಾರಣೆಯವರೆಗೆ ಸರ್ಕಾರದ ಆದೇಶಕ್ಕೆ ತಡೆ ನೀಡಿತ್ತು. ಮಧ್ಯಂತರ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸಲು ಸರ್ಕಾರ ಸ್ವತಂತ್ರ ಎಂದು ಇದೆ ವೇಳೆ ಹೈಕೋರ್ಟ್ ಏಕ ಸದಸ್ಯ ಪೀಠ ಅಭಿಪ್ರಾಯಪಟ್ಟಿತ್ತು. ಇದೀಗ ಹೈಕೋರ್ಟ್ ತನ್ನದೇ ಆದೇಶವನ್ನು ಮತ್ತೆ ಹಿಂಪಡೆದಿದೆ.








