ಶಿವಮೊಗ್ಗ: ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ಸನ್ನಿಧಿಯಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಸಿಗಂದೂರು ಜಾತ್ರಾ ಮಹೋತ್ಸವ ನಡೆಯಲಿದೆ. ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಜಾತ್ರೆಗೆ ಚಾಲನೆ ನೀಡಲಿದ್ದಾರೆ. ಮೂಲಸ್ಥಾನದಲ್ಲಿ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಲಿವೆ. ಜಾತ್ರೆಯ ಪ್ರಯುಕ್ತ ಸಿಗಂದೂರು ಸೇತುವೆ, ದೇವಸ್ಥಾನವನ್ನು ತಳಿರು ತೋರಣ, ಬಗೆ ಬಗೆಯ ಹೂಗಳಿಂದ ಸಿಂಗರಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸಿಗಂದೂರಿನಲ್ಲಿ ಚೌಡೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ತೂಗು ಸೇತುವೆಯ ಬಳಿಕ ಮೊದಲ ಮಕರ ಸಂಕ್ರಾಂತಿ ಜಾತ್ರೆ ನಾಳೆ ನಡೆಯಲಿದೆ. ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ಸನ್ನಿಧಿಗೆ ಲಕ್ಷಾಂತರ ಭಕ್ತರ ದಂಡೇ ಹರಿದು ಬರುವ ನಿರೀಕ್ಷೆಯಲ್ಲಿ ದೇವಸ್ಥಾನ ಆಡಳಿತ ಮಂಡಳಿ ಇದೆ.
ಮಕರ ಸಂಕ್ರಾಂತಿಯ ಪ್ರಯುಕ್ತ ನಡೆಯುವಂತ ಜಾತ್ರಾ ಮಹೋತ್ಸವಕ್ಕೆ ಸಿಗಂದೂರು ತೂಗುಸೇತುವೆಯನ್ನು ಮಾವಿನ ತೋರಣದಿಂದ ಅಲಂಕರಿಸಲಾಗಿದೆ. ದಾರಿಯುದ್ಧಕ್ಕೂ ಭಕ್ತರನ್ನು ತಳಿರು ತೋರಣಗಳು ಸ್ವಾಗತಿಸುತ್ತವೆ. ದೇವಸ್ಥಾನದ ಆವರಣದಲ್ಲಿ ವಿಶೇಷ ರೀತಿಯಲ್ಲಿ ಬಗೆ ಬಗೆಯ ಹೂವುಗಳಿಂದ ಸಿಂಗರಿಸಲಾಗಿದೆ. ಭಕ್ತಾಧಿಗಳಿಗೆ ಯಾವುದೇ ಕೊರತೆಯಾಗದಂತೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ.

ಭಕ್ತರನ್ನು ಸ್ವಾಗತಿಸಲು ದೇವಸ್ಥಾನ ಆಡಳಿತ ಮಂಡಳಿ ಸಕಲ ಸಿದ್ಧವೆಂದ ಅನುವಂಶಿಕ ಧರ್ಮದರ್ಶಿಗಳು
ಈ ಬಗ್ಗೆ ಮಾಹಿತಿ ಹಂಚಿಕೊಂಡ ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯದ ಅನುವಂಶಿಕ ಧರ್ಮದರ್ಶಿ ಡಾ.ಎಸ್.ರಾಮಪ್ಪ ಅವರು, ಇದೇ ಮೊದಲ ಬಾರಿಗೆ ತೂಗು ಸೇತುವೆಯ ಬಳಿಕ ಮಕರ ಸಂಕ್ರಾಂತಿ ಪ್ರಯುಕ್ತ ಪ್ರತಿ ವರ್ಷ ನಡೆಯುವಂತ ಸಿಗಂದೂರು ಜಾತ್ರೆ ನಡೆಯುತ್ತಿದೆ. ದೇವಾಲಯವು ಭಕ್ತರನ್ನು ಸ್ವಾಗತಿಸಲು ಎಲ್ಲಾ ರೀತಿಯ ತಯಾರಿಯನ್ನು ಪೂರ್ಣಗೊಳಿಸಿದೆ ಎಂದರು.
ಈ ಮೊದಲು ಲಾಂಚ್ ಮೂಲಕ ಭಕ್ತರು ಆಗಮಿಸುತ್ತಿದ್ದರು. ಇದೀಗ ಹೊಸದಾಗಿ ತೂಗು ಸೇತುವೆ ಆಗಿರುವ ಕಾರಣ ಲಕ್ಷಾಂತರ ಭಕ್ತರು ಸಿಗಂದೂರು ಜಾತ್ರೆಗೆ ಆಗಮಿಸುವ ನಿರೀಕ್ಷೆಯಿದೆ. ಭಕ್ತರಲ್ಲಿ ಒಂದು ವಿನಂತಿ ಅಂದ್ರೇ ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಿಸಿ. ಪರಿಸರಕ್ಕೆ ಹಾನಿಕಾರಕ ಮಾಡಬೇಡಿ. ವಾಹನಗಳ ನಿಲುಗಡೆಗಾಗಿ ನಿಗದಿ ಪಡಿಸಿರುವಂತ ಪಾರ್ಕಿಂಗ್ ಪ್ರದೇಶದಲ್ಲಿ ಮಾಡಿ ಎಂಬುದಾಗಿ ಮನವಿ ಮಾಡಿದರು.

ನಾಳೆ ಬೆಳಗ್ಗೆಯಿಂದಲೇ ಧಾರ್ಮಿಕ ಕೈಂಕರ್ಯಗಳು ಆರಂಭವೆಂದ ಪ್ರಧಾನ ಕಾರ್ಯದರ್ಶಿಗಳು
ಶ್ರೀ ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಹೆಚ್.ಆರ್ ರವಿಕುಮಾರ್ ಮಾತನಾಡಿ, ನಾಳೆಯ ಸಿಗಂದೂರು ಜಾತ್ರೆಗೆ ಆಡಳಿತ ಮಂಡಳಿಯು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಭಕ್ತರಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಕರ್ಯದ ಯಾವುದೇ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆಯಿಂದಲೇ ಮೂಲಸ್ಥಳದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ಆರಂಭಗೊಳ್ಳಲಿವೆ. ಪೂರ್ಣಕುಂಭದ ಮೂಲದ ಜ್ಯೋತಿಯನ್ನು ಮರೆವಣಿಗೆಯಲ್ಲಿ ಕರೆತರಲಾಗುತ್ತದೆ ಎಂದರು.
ತೂಗು ಸೇತುವೆಯ ಬಳಿಕ ಮೊದಲ ಸಿಗಂದೂರು ಜಾತ್ರಾ ಮಹೋತ್ಸವ ಇದಾಗಿದೆ. ಲಕ್ಷಾಂತರ ಭಕ್ತರು ನಾಳೆ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ನಿರೀಕ್ಷೆಯಿದೆ. ಯಾವುದೇ ಕೊರತೆ ಆಗದಂತೆ ದೇವಸ್ಥಾನದ ಆಡಳಿತ ಮಂಡಳಿ ಅಂತಿಮ ಸಿದ್ಧತೆ ಮಾಡಿದೆ. ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ಜಾತ್ರೆಗೆ ಆಗಮಿಸುತ್ತಿರುವಂತ ಎಲ್ಲಾ ಭಕ್ತರಿಗೆ ಸ್ವಾಗತ ಹಾಗೂ ಹೊಸ ವರ್ಷದ ಶುಭಾಶಯಗಳು ಎಂಬುದಾಗಿ ತಿಳಿಸಿದರು.

ಭದ್ರತೆಗಾಗಿ 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ
ಈ ಬಗ್ಗೆ ಕಾರ್ಗಲ್ ಪೊಲೀಸ್ ಠಾಣೆಯ ಪಿಎಸ್ಐ ನಾಗರಾಜ ಹೆಚ್.ಎನ್ ಮಾಹಿತಿ ನೀಡಿದ್ದು, ಸಿಗಂದೂರು ಜಾತ್ರೆಗಾಗಿ ಪೊಲೀಸರು ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದ್ದಾರೆ. ಇಬ್ಬರು ಸಿಪಿಐ, ಮೂವರು ಪಿಎಸ್ಐ, 7 ಎಎಸ್ಐ, 50 ಎಸ್ಸಿ, ಪಿಸಿ, 25 ಹೆಡ್ ಕಾನ್ಸ್ ಸ್ಟೇಬಲ್, ಡಿಆರ್ ಸೇರಿದಂತೆ 100 ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂಬುದಾಗಿ ಹೇಳಿದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು…
BREAKING: ಭಾರತ ಸೇರಿದಂತೆ ವಿಶ್ವದಾದ್ಯಂತ ಎಕ್ಸ್ ಡೌನ್: ಬಳಕೆದಾರರು ಪರದಾಟ | X Down
ಶಿವಮೊಗ್ಗ ಜಿಲ್ಲೆಯ ಜನತೆಗೆ 3023.95 ಕೋಟಿ ಗ್ಯಾರಂಟಿ ಯೋಜನೆಗಳಿಗಾಗಿ ವೆಚ್ಚ: ಉಪಾಧ್ಯಕ್ಷ ದಿನೇಶ್ ಗೂಳಿಗೌಡ








