ಟಾಯ್ಲೆಟ್ ಕ್ಲೀನ್ ಮಾಡುವುದು ಅಂದ್ರೆ ಸಾಕು, ಹೆಚ್ಚಿನವರು ಮೂಗು ಮುರಿಯುತ್ತಾರೆ. ಬ್ರಷ್ ಹಿಡಿದು ಗಂಟೆಗಟ್ಟಲೆ ಉಜ್ಜುವುದು, ದುಬಾರಿ ಕೆಮಿಕಲ್ ಕ್ಲೀನರ್‌ಗಳನ್ನು ಬಳಸುವುದು ಸಾಮಾನ್ಯ. ಆದರೆ, ನಿಮ್ಮ ಫ್ರಿಡ್ಜ್‌ನಲ್ಲಿರುವ ಐಸ್ ಕ್ಯೂಬ್‌ಗಳ (ಮಂಜುಗಡ್ಡೆ) ಸಹಾಯದಿಂದ ಟಾಯ್ಲೆಟ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು ಎಂದರೆ ನೀವು ನಂಬುತ್ತೀರಾ? ಹೌದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೊಂದು ವಿಭಿನ್ನ ಕ್ಲೀನಿಂಗ್ ಟ್ರಿಕ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಾರಕ್ಕೆ ಒಮ್ಮೆಯಾದರೂ ಟಾಯ್ಲೆಟ್ ಕಮೋಡ್ ಒಳಗೆ ಒಂದು ಕಪ್ ಐಸ್ ಕ್ಯೂಬ್ಸ್ ಹಾಕುವಂತೆ ನೆಟ್ಟಿಗರು ಸಲಹೆ ನೀಡುತ್ತಿದ್ದಾರೆ. ಈ ಸರಳ ಉಪಾಯವು ಟಾಯ್ಲೆಟ್ ಅನ್ನು ಸ್ವಚ್ಛಗೊಳಿಸಲು, ದುರ್ವಾಸನೆ ಕಡಿಮೆ ಮಾಡಲು ಮತ್ತು ಕಲೆಗಳನ್ನು ಸುಲಭವಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ. ಹಾಗಾದರೆ, ಈ ಐಸ್ ಕ್ಯೂಬ್‌ಗಳು ಹೇಗೆ ಕೆಲಸ ಮಾಡುತ್ತವೆ? ಇದರ ಹಿಂದಿರುವ ರಹಸ್ಯವೇನು? ಇಲ್ಲಿದೆ ಮಾಹಿತಿ.
ಐಸ್ ಕ್ಯೂಬ್ಸ್ ಟಾಯ್ಲೆಟ್ ಅನ್ನು ಹೇಗೆ ಸ್ವಚ್ಛಗೊಳಿಸುತ್ತವೆ?
ನೀವು ಟಾಯ್ಲೆಟ್‌ಗೆ ಐಸ್ ಕ್ಯೂಬ್‌ಗಳನ್ನು ಹಾಕಿ ಫ್ಲಶ್ ಮಾಡಿದಾಗ, ಆ ಐಸ್ ಮುಖಗಳು ನೀರಿನೊಂದಿಗೆ ವೇಗವಾಗಿ ತಿರುಗುತ್ತವೆ. ಈ ಸಂದರ್ಭದಲ್ಲಿ ಉಂಟಾಗುವ ಘರ್ಷಣೆಯು (Friction) ಟಾಯ್ಲೆಟ್ ಕಮೋಡ್ ಮೇಲ್ಮೈಗೆ ಯಾವುದೇ ಹಾನಿ ಮಾಡದೆಯೇ, ಅಲ್ಲಿ ಜಮೆಯಾಗಿರುವ ಹಗುರವಾದ ಕೊಳಕು, ಕಲೆಗಳು ಮತ್ತು ಪಾಚಿಯನ್ನು (ಬೂಜು) ಸುಲಭವಾಗಿ ಸಡಿಲಗೊಳಿಸಿ ಕಿತ್ತುಬರುವಂತೆ ಮಾಡುತ್ತದೆ.
ಕ್ಲೀನರ್ ಜೊತೆ ಬಳಸಿದರೆ ದುಪ್ಪಟ್ಟು ಲಾಭ!
ಕೇವಲ ಐಸ್ ಮಾತ್ರವಲ್ಲದೆ, ಅದರೊಂದಿಗೆ ಸ್ವಲ್ಪ ಟಾಯ್ಲೆಟ್ ಕ್ಲೀನರ್ ಅನ್ನು ಬಳಸಿದರೆ ಫಲಿತಾಂಶ ಇನ್ನೂ ಅದ್ಭುತವಾಗಿರುತ್ತದೆ. ಸಾಮಾನ್ಯವಾಗಿ ಲಿಕ್ವಿಡ್ ಕ್ಲೀನರ್ ಹಾಕಿದ ತಕ್ಷಣ ಅದು ನೀರಿನೊಂದಿಗೆ ಕೊಚ್ಚಿ ಹೋಗುತ್ತದೆ. ಆದರೆ ಐಸ್ ಕ್ಯೂಬ್‌ಗಳ ಮೇಲೆ ಕ್ಲೀನರ್ ಹಾಕಿದಾಗ, ಐಸ್ ನಿಧಾನವಾಗಿ ಕರಗುವುದರಿಂದ ಕ್ಲೀನರ್ ದೀರ್ಘಕಾಲ ಟಾಯ್ಲೆಟ್ ಗೋಡೆಗಳಿಗೆ ಅಂಟಿಕೊಳ್ಳುತ್ತದೆ. ಇದು ಕಲೆಗಳನ್ನು ಆಳವಾಗಿ ಸ್ವಚ್ಛಗೊಳಿಸಲು ಸಹಾಯ ಮಾಡುವುದಲ್ಲದೆ, ಕ್ಲೀನರ್ ಪೋಲಾಗುವುದನ್ನು ತಡೆಯುತ್ತದೆ.
ದುರ್ವಾಸನೆಗೆ ಬ್ರೇಕ್ ಹಾಕುತ್ತೆ ಈ ಐಡಿಯಾ..
ಟಾಯ್ಲೆಟ್‌ನಿಂದ ಬರುವ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಐಸ್ ಕ್ಯೂಬ್ಸ್ ಜೊತೆಗೆ ಸ್ವಲ್ಪ ಬಿಳಿ ವಿನೆಗರ್ (White Vinegar) ಅಥವಾ ಅಡುಗೆ ಸೋಡಾವನ್ನು (Baking Soda) ಬಳಸಬಹುದು. ಇದು ಯಾವುದೇ ಕಠಿಣ ರಾಸಾಯನಿಕಗಳಿಲ್ಲದೆ ನೈಸರ್ಗಿಕವಾಗಿ ದುರ್ವಾಸನೆಯನ್ನು ನಿವಾರಿಸಿ, ಟಾಯ್ಲೆಟ್ ಸದಾ ಫ್ರೆಶ್ ಆಗಿರುವಂತೆ ನೋಡಿಕೊಳ್ಳುತ್ತದೆ.
ನೆನಪಿನಲ್ಲಿಡಬೇಕಾದ ಪ್ರಮುಖ ವಿಷಯಗಳು:
ರಾಸಾಯನಿಕಗಳನ್ನು ಮಿಶ್ರಣ ಮಾಡಬೇಡಿ: ಐಸ್ ಟ್ರಿಕ್ ಬಳಸುವಾಗ ನೆನಪಿರಲಿ, ಬ್ಲೀಚಿಂಗ್ ಪೌಡರ್ ಮತ್ತು ಇತರ ಆಸಿಡ್ ಕ್ಲೀನರ್‌ಗಳನ್ನು ಒಟ್ಟಿಗೆ ಮಿಶ್ರಣ ಮಾಡಬೇಡಿ. ಇದರಿಂದ ವಿಷಕಾರಿ ಅನಿಲಗಳು ಬಿಡುಗಡೆಯಾಗುವ ಅಪಾಯವಿರುತ್ತದೆ. ಯಾವುದಾದರೂ ಒಂದು ಕ್ಲೀನರ್ ಮಾತ್ರ ಬಳಸಿ.
ಐಸ್ ಗಾತ್ರ ಗಮನಿಸಿ: ಟಾಯ್ಲೆಟ್‌ಗೆ ಹಾಕುವ ಐಸ್ ಕ್ಯೂಬ್‌ಗಳು ತೀರಾ ದೊಡ್ಡದಾಗಿ ಅಥವಾ ಮೊನಚಾಗಿ ಇರಬಾರದು. ಸಾಧಾರಣ ಗಾತ್ರದ ಕ್ಯೂಬ್‌ಗಳನ್ನು ಬಳಸುವುದು ಸೂಕ್ತ.
ಒಟ್ಟಿನಲ್ಲಿ, ದುಬಾರಿ ಖರ್ಚಿಲ್ಲದೆ ಮನೆಯಲ್ಲಿಯೇ ಟಾಯ್ಲೆಟ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳಲು ಈ ವೈರಲ್ ‘ಐಸ್ ಟ್ರಿಕ್’ ನಿಜಕ್ಕೂ ಒಂದು ಸ್ಮಾರ್ಟ್ ಐಡಿಯಾ ಎನ್ನಬಹುದು!








