ಶಿವಮೊಗ್ಗ: ಜಿಲ್ಲೆಯ ಸಾಗರದ ಸುದ್ದಿ ಸಹ್ಯಾದ್ರಿ ಪತ್ರಿಕಾ ಬಳಗದಿಂದ ಇಂದು ಸಾಂಸ್ಕೃತಿಕ ಸಂಜೆ ಹಾಗೂ ರಾಜ್ಯ ಮಟ್ಟದ ಸಹ್ಯಾದ್ರಿ ಸಾಧಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ಪ್ರಧಾನ ಸಂಪಾದಕ ರಾಘವೇಂದ್ರ ತಾಳಗುಪ್ಪ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ಸಾಗರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎನ್ನುವಂತೆ ಸುದ್ದಿ ಸಹ್ಯಾದ್ರಿ ಪತ್ರಿಕಾ ಬಳಗದಿಂದ ಸಾಂಸ್ಕೃತಿಕ ಸಂಜೆ ಹಾಗೂ ರಾಜ್ಯ ಮಟ್ಟದ ಸಹ್ಯಾದ್ರಿ ಸಾಧಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಚಲನಚಿತ್ರ ಸಂಗೀತ ನಿರ್ದೇಶಕ ವಿ.ಮನೋಹರ್ ಭಾಗವಹಿಸಲಿದ್ದಾರೆ. ಅಲ್ಲದೇ ಸ್ಯಾಂಡಲ್ ವುಡ್ ಖ್ಯಾತ ನಟ, ನಿರೂಪಕ ಸೃಜನ್ ಲೋಕೇಶ್ ಕೂಡ ಜೊತೆಗಿರಲಿದ್ದಾರೆ ಎಂದು ಹೇಳಿದ್ದಾರೆ.

ಇಂದು ಸಂಜೆ 4.30ರಿಂದ ಸಾಗರದ ಗಾಂಧಿನಗರದ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದಲ್ಲಿ ಸುದ್ದಿ ಸಹ್ಯಾದ್ರಿ ಪತ್ರಿಕಾ ಬಳಗದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಜಿ ಕನ್ನಡದ ಸರಿಗಮಪ ಖ್ಯಾತಿ ಹಾಗೂ ಉತ್ತರ ಕರ್ನಾಟಕದ ಅತ್ಯಂತ ಜನಪ್ರಿಯ ಹಾಡುಗಾರ ಬಾಳು ಬೆಳಗುಂದಿ, ಜ್ಞಾನೇಶ ಅವರುಗಳು ಜನರನ್ನು ಹಾಡಿ ರಂಜಿಸಲ ಬರಲಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.
ರಾತ್ರಿ 7 ರಿಂದ ರಾಜ್ಯಮಟ್ಟದ ಸಹ್ಯಾದ್ರಿ ಸಾಧಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವನ್ನು ಚಿತ್ರದುರ್ಗದ ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಜಗದ್ಗುರು ಡಾ.ಬಸವ ಮಾಚಿದೇವ ಮಹಾಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಗರದ ಶಾಸಕ ಗೋಪಾಲಕೃಷ್ಣ ಬೇಳೂರು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿವೈ ರಾಘವೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ, ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಧಾನದ ಧರ್ಮದರ್ಶಿ ಡಾ.ರಾಮಪ್ಪ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ಸಾಗರದ ಜನತೆ ಇಂದು ಸಂಜೆ 4.30ರಿಂದ ಆರಂಭಗೊಳ್ಳಲಿರುವಂತ ಸುದ್ದಿ ಸಹ್ಯಾದ್ರಿ ಪತ್ರಿಕಾ ಬಳಗದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಯಶಸ್ವಿಗೊಳಿಸುವಂತೆ ಸುದ್ದಿ ಸಹ್ಯಾದ್ರಿ ಪತ್ರಿಕಾ ಬಳಗದ ಪ್ರಧಾನ ಸಂಪಾದಕ ರಾಘವೇಂದ್ರ ತಾಳಗುಪ್ಪ ಮನವಿ ಮಾಡಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು








