ಕಲಬುರಗಿ : ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಮೂರು ಜಲಮೂಲಗಳಲ್ಲಿ ಒಂದಾದ ಭೀಮಾ ನದಿಯಿಂದ ಕಲುಷಿತ ನೀರು ಬರುತ್ತಿದ್ದು, ಈ ಕುಡಿಯುವ ನೀರನ್ನು ಶುದ್ಧೀಕರಿಸಿ, ಸೂಪರ್ ಕ್ಲೋರಿನೇಶನ್ ಮಾಡಿ ನೀರು ಸರಬರಾಜು ಮಾಡಲಾಗುತ್ತಿದೆ. ಆದಗ್ಯೂ ಸಹ ಕಲಬುರಗಿ ನಗರದ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮವಾಗಿ ಕುಡಿಯುವ ನೀರನ್ನು ಕಾಯಿಸಿ, ಆರಿಸಿ ಮತ್ತು ಸೊಸಿ ಕುಡಿಯಬೇಕೆಂದು ಕಲಬುರಗಿ ಕೆಯುಡಬ್ಲ್ಯೂಎಸ್‍ಎಂಪಿ, ಕೆಯುಐಡಿಎಫ್‍ಸಿ ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ನಗರದ ಸಾರ್ವಜನಿಕರು ತಮ್ಮ ಮನೆಗಳಿಗೆ ತೆಗೆದುಕೊಂಡ ನಳದ ಜೋಡಣೆಗೆ ತೊಟ್ಟಿಯನ್ನು ಕಡ್ಡಾಯವಾಗಿ ಕೂಡಿಸಿಕೊಳ್ಳಬೇಕು. ನಳದ ತಗ್ಗುಗಳನ್ನು ಮುಚ್ಚಬೇಕು. ಏಕೆಂದರೆ ತಗ್ಗುಗಳಲ್ಲಿ ಕಲುಷಿತ ನೀರು ಸಂಗ್ರಹಣೆಯಾಗಿ ಅದೇ ನೀರು ಮತ್ತೆ ನಳದ ತೊಟ್ಟಿಯಲ್ಲಿ ಸೇರುವ ಮೂಲಕ ಮುಂದಿನ ಗ್ರಾಹಕರಿಗೆ ತಲುಪುತ್ತದೆ. ಇದರಿಂದ ಸಂಕ್ರಾಮಿಕ ರೋಗ ಹರಡುವ ಸಂಭವ ಇರುತ್ತದೆ ಹಾಗೂ ನೀರು ಪೋಲಾಗದಂತೆ ನೋಡಿಕೊಳ್ಳಬಹುದಾಗಿದೆ.
ಕಲಬುರಗಿ ನಗರದ ಸಾರ್ವಜನಿಕರು ಕಲುಷಿತ ನೀರು ಅಥವಾ ಯಾವುದೇ ರೀತಿಯ ಕುಡಿಯುವ ನೀರಿಗೆ ಸಂಬಂಧಪಟ್ಟ ದೂರುಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆಗಳಿಗೆ 08472-237247/ 08472-266611 ಗಳಿಗೆ ಸಂಪರ್ಕಿಸಿ ದೂರು ಸಲ್ಲಿಸಬಹುದಾಗಿದೆ. ಕಲಬುರಗಿ ಸಾರ್ವಜನಿಕರು ಮಹಾನಗರಪಾಲಿಕೆ, ಕೆಯುಐಡಿಎಫ್‍ಸಿ ಹಾಗೂ ಮೆ|| ಎಲ್ ಆಂಡ್ ಟಿ ಲಿಮಿಟೆಡ್ ಇವರೊಂದಿಗೆ ಸಹಕರಿಬೇಕೆಂದು ಅವರು ತಿಳಿಸಿದ್ದಾರೆ.