ಕೋಲ್ಕತ್ತಾ : ವಾರಣಾಸಿಯ ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅನುಮತಿ ನೀಡಿದೆ. ಇದು ಸಜಂಜಸವಲ್ಲ. ಯೋಗಿ ಆದಿತ್ಯನಾಥ್ ಅವರು ಪಶ್ಚಿಮ ಬಂಗಾಳಕ್ಕೆ ಬಂದರೆ ನಾವು ಅವರನ್ನು ಸುತ್ತುವರಿಯುತ್ತೇವೆ ಎಂದು TMC ನಾಯಕ ಸಿದ್ದಿಕುಲ್ಲಾ ಚೌಧರಿ ಎಚ್ಚರಿಕೆ ನೀಡಿದ್ದಾರೆ.
ಮಸೀದಿಯಲ್ಲಿ ಪೂಜೆಯನ್ನು ನಿಷೇಧಿಸುವಂತೆ ಕೋಲ್ಕತ್ತಾದಲ್ಲಿ ಜಮಿಯತ್ ಉಲೇಮಾ-ಎ-ಹಿಂದ್ ರ‍್ಯಾಲಿಯಲ್ಲಿ ಚೌಧರಿ ಭಾಗವಹಿಸಿದ್ದರು.ನಾವು ಪ್ರಾರ್ಥನೆ ಸಲ್ಲಿಸಲು ಯಾವುದೇ ದೇವಸ್ಥಾನಕ್ಕೆ ಹೋಗುವುದಿಲ್ಲ. ಹೀಗಿರುವಾಗ ಅವರು ಯಾಕೆ ನಮ್ಮ ಮಸೀದಿಗಳಿಗೆ ಬರುತ್ತಿದ್ದಾರೆ? ಎಂದು ಪ್ರಶ್ನಿಸಿದರು.
ಮಸೀದಿ ಎಂದರೆ ಅದು ಮಸೀದಿ ಅಷ್ಟೇ ಆಗಿರುತ್ತದೆ. ಯಾರಾದರೂ ಮಸೀದಿಯನ್ನು ದೇವಸ್ಥಾನವಾಗಿ ಪರಿವರ್ತಿಸಲು ಬಯಸಿದರೆ ನಾವು ಸುಮ್ಮನೆ ಕುಳಿತುಕೊಳಲ್ಲ. ಜ್ಞಾನವಾಪಿ ಮಸೀದಿಗೆ ಸುಮಾರು 800 ವರ್ಷಗಳ ಇತಿಹಾಸವಿದೆ. ಅವರು ಅದನ್ನು ಹೇಗೆ ಕೆಡವುತ್ತಾರೆ ಎಂದು ಪ್ರಶ್ನಿಸಿದರು.
ಹಿಂದೂ ಆರಾಧಕರು ಬಲವಂತವಾಗಿ ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಪ್ರಾರಂಭಿಸಿದ್ದಾರೆ. ಹೀಗಾಗಿ ಅವರು ತಕ್ಷಣವೇ ಅಲ್ಲಿಂದ ಜಾಗ ಖಾಲಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿಗಳ ಈ ಕ್ರಮಕ್ಕೆ ಏನಾದರೂ ಅರ್ಥ ಇದೆಯಾ ಎಂದು ಪ್ರಶ್ನಿಸಿದರು. ಅವರು ಬಂಗಾಳಕ್ಕೆ ಬಂದರೆ ಅವರನ್ನು ಹೊರಗೆ ಹೋಗಲು ನಾವು ಬಿಡಲ್ಲ ಎಂದು ಕಿಡಿಕಾರಿದರು.