ರಾಯಚೂರು : ಜಿಲ್ಲೆಯ ಸಿರಿವಾರ ಪಟ್ಟಣದಲ್ಲಿ ಕಿಡಿಗೇಡಿಗಳು ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ್ದರು. ಈ ಪ್ರಕರಣ ಸಂಬಂಧ ಸಿರವಾರ ಪಟ್ಟಣ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನ ಮಾನ್ವಿ ತಾಲೂಕಿನ ಸಿರವಾರ ಪಟ್ಟಣದ ನಿವಾಸಿ ಆಕಾಶ್ (23) ಎಂದು ಹೇಳಲಾಗುತ್ತಿದೆ.
ಜನವರಿ 31ರಂದು ಮಾನ್ವಿ ತಾಲೂಕಿನ ಸಿರವಾರ ಪಟ್ಟಣದ ಮಟನ್ ಮಾರ್ಕೆಟ್ ಬಳಿ ಇರುವ ಟಿಪ್ಪು ಸರ್ಕಲ್ನಲ್ಲಿ ಹಾಕಲಾಗಿರುವ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಕಿಡಿಗೇಡಿಗಳು ರಾತ್ರೋರಾತ್ರಿ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದಿದ್ದರು. ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿರುವುದು ಕಂಡ ಮುಸ್ಲಿಮರು ತೀವ್ರ ಆಕ್ರೋಶ ಹೊರ ಹಾಕಿದ್ದರು. ಅಲ್ಲದೆ ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದ್ದರು.
ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ್ದರು. ಸಿರವಾರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಎರಡು ವಿಶೇಷ ತಂಡ ರಚಿಸಿದ್ದರು. ಪೊಲೀಸರು ಸ್ಥಳೀಯ ಸಿಸಿ ಟಿವಿ ಫೂಟೇಜ್ಗಳ ಪರಿಶೀಲನೆ ನಡೆಸಿದ್ದರು.
ಅಲ್ಲದೆ ರಾಜ್ಯದಲ್ಲಿ ಹನುಮಧ್ವಜ ವಿಚಾರ ಕುರಿತಾಗಿ ಬಾರಿ ಸದ್ದು ಮಾಡುತ್ತಿದ್ದು ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮಂತ ಧ್ವಜ ತೆರವುಗೊಳಿಸಿದ್ದಕ್ಕಾಗಿ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ಇತ್ತೀಚಿಗೆ ಗ್ರಾಮದಲ್ಲಿ ಪಾದಯಾತ್ರೆ ನಡೆಸಿ ಹಾಗೂ ಪ್ರತಿಭಟನೆಯನ್ನು ಮಾಡಿದ್ದರು. ಈ ವೇಳೆ ಪ್ರತಿಭಟನೆ ಹತ್ತಿಕ್ಕಲು ಲಾಠಿಚಾರ್ಜ್ ಕೂಡ ಮಾಡಲಾಗಿತ್ತು. ಈಗ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕೂಡ ಹನುಮಧ್ವಜ ವಿಚಾರ ಭಾರಿ ಸದ್ದು ಮಾಡುತ್ತಿದೆ.