ನವದೆಹಲಿ: ವಿಮಾನ ಪ್ರಯಾಣಿಕರಿಗೆ ಕೇಂದ್ರ ಸರ್ಕಾರವು ಬಿಗ್ ಶಾಕ್ ನೀಡಿದೆ. ದೇಶೀಯ ವಿಮಾನ ಪ್ರಯಾಣದ ದರಗಳ ಮೇಲೆ ಹೇರಲಾಗಿದ್ದ ಗರಿಷ್ಠ ಮತ್ತು ಕನಿಷ್ಠ ಮಿತಿಯನ್ನು (Airfare Cap) ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಅಧಿಕೃತವಾಗಿ ತೆರವುಗೊಳಿಸಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ಮುಂಬರುವ ದಿನಗಳಲ್ಲಿ ವಿಮಾನ ಟಿಕೆಟ್ ದರಗಳು ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆಯಿದೆ.
ಇದುವರೆಗೆ ವಿಮಾನಯಾನ ಸಂಸ್ಥೆಗಳು ಟಿಕೆಟ್ ದರವನ್ನು ಸರ್ಕಾರದ ಮಿತಿಯೊಳಗೆ ಇಡಬೇಕಿತ್ತು. ಆದರೆ ಇನ್ನು ಮುಂದೆ ಬೇಡಿಕೆ ಮತ್ತು ಪೂರೈಕೆಗೆ ಅನುಗುಣವಾಗಿ ವಿಮಾನಯಾನ ಸಂಸ್ಥೆಗಳೇ ಟಿಕೆಟ್ ದರವನ್ನು ಮುಕ್ತವಾಗಿ ನಿಗದಿಪಡಿಸಲಿವೆ.ವಾರಾಂತ್ಯಗಳು, ಹಬ್ಬದ ಸೀಸನ್ ಮತ್ತು ರಜಾ ದಿನಗಳಲ್ಲಿ ವಿಮಾನ ಟಿಕೆಟ್ ದರಗಳು ದುಪ್ಪಟ್ಟಾಗುವ ಆತಂಕ ಎದುರಾಗಿದೆ. ವಿಶೇಷವಾಗಿ ಕೊನೆಯ ಕ್ಷಣದಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ದರ ಏರಿಕೆಯ ಬಿಸಿ ಜೋರಾಗಿ ತಟ್ಟಲಿದೆ.
ವಿಮಾನ ಇಂಧನ (ATF) ಬೆಲೆಯಲ್ಲಿನ ನಿರಂತರ ಏರಿಕೆ ಮತ್ತು ವಿಮಾನಯಾನ ಸಂಸ್ಥೆಗಳ ಆರ್ಥಿಕ ನಷ್ಟವನ್ನು ಸರಿದೂಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಆರೋಗ್ಯಕರ ಸ್ಪರ್ಧೆ ಏರ್ಪಡಲು ಇದು ಸಹಕಾರಿ ಎಂಬುದು ಸರ್ಕಾರದ ವಾದ.
ಪಶ್ಚಿಮ ಏಷ್ಯಾದ ಯುದ್ಧದಿಂದಾಗಿ ಈಗಾಗಲೇ ಅಂತರಾಷ್ಟ್ರೀಯ ವಿಮಾನ ದರಗಳು ಹೆಚ್ಚಾಗಿವೆ. ಈಗ ದೇಶೀಯ ಮಾರ್ಗಗಳಲ್ಲೂ ಬೆಲೆ ಏರಿಕೆಯಾದರೆ ಸಾಮಾನ್ಯ ವರ್ಗದ ಪ್ರಯಾಣಿಕರು ವಿಮಾನ ಪ್ರಯಾಣದಿಂದ ದೂರ ಉಳಿಯುವಂತಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.








