ಸ್ಯಾನ್ ಡಿಯಾಗೋ (ಅಮೆರಿಕ): ಅಮೆರಿಕದಲ್ಲಿ ಗನ್ ಸಂಸ್ಕೃತಿಯ ಅಟ್ಟಹಾಸ ಮುಂದುವರಿದಿದ್ದು, ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿರುವ ಮಸೀದಿಯೊಂದರಲ್ಲಿ ನಡೆದ ಭೀಕರ ಗುಂಡಿನ ದಾಳಿಗೆ (Mosque Shooting) ಮೂವರು ಅಮಾಯಕರು ಬಲಿಯಾಗಿದ್ದಾರೆ. ಘಟನೆಯ ಬೆನ್ನಲ್ಲೇ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಮತ್ತೊಂದು ಶಾಕಿಂಗ್ ಟ್ವಿಸ್ಟ್ ಸಿಕ್ಕಿದ್ದು, ಈ ದಾಳಿಯ ಹಿಂದೆ ಇದ್ದಾರೆನ್ನಲಾದ ಇಬ್ಬರು ಹದಿಹರೆಯದ (Teenagers) ಶಂಕಿತರು ಕೂಡ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದಾರೆ.
ಧಾರ್ಮಿಕ ಪ್ರಾರ್ಥನಾ ಮಂದಿರದ ಮೇಲೆಯೇ ನಡೆದಿರುವ ಈ ದಾಳಿಯು ಅಮೆರಿಕಾದ್ಯಂತ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.ಸ್ಯಾನ್ ಡಿಯಾಗೋದ ಪ್ರಮುಖ ಮಸೀದಿಯೊಂದರಲ್ಲಿ ಪ್ರಾರ್ಥನೆ ನಡೆಯುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. ದುರುಳರು ಏಕಾಏಕಿ ನಡೆಸಿದ ಗುಂಡಿನ ಮಳೆಗೆ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ದಾಳಿ ನಡೆಸಿ ಪರಾರಿಯಾಗಿದ್ದ ಇಬ್ಬರು ಟೀನೇಜ್ ಶಂಕಿತರಿಗಾಗಿ ಪೊಲೀಸರು ಬೃಹತ್ ಜಾಲ ಬೀಸಿದ್ದರು. ಆದರೆ, ತದನಂತರದ ಕಾರ್ಯಾಚರಣೆಯಲ್ಲಿ ಅವರಿಬ್ಬರೂ ಮೃತಪಟ್ಟಿರುವುದು ಪತ್ತೆಯಾಗಿದೆ. ಅವರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆಯೇ ಅಥವಾ ದಾಳಿಯ ಬಳಿಕ ತಾವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬುದು ಇನ್ನು ತನಿಖೆಯಿಂದ ತಿಳಿಯಬೇಕಿದೆ.
ಈ ಘಟನೆಯ ಬೆನ್ನಲ್ಲೇ ಸ್ಯಾನ್ ಡಿಯಾಗೋ ಮತ್ತು ಸುತ್ತಮುತ್ತಲಿನ ಧಾರ್ಮಿಕ ಕೇಂದ್ರಗಳ ಬಳಿ ಅಮೆರಿಕದ ರಕ್ಷಣಾ ಪಡೆಗಳು ಭದ್ರತೆಯನ್ನು ತೀವ್ರಗೊಳಿಸಿವೆ. ಇದೊಂದು ಜನಾಂಗೀಯ ದ್ವೇಷದ (Hate Crime) ದಾಳಿಯೇ ಎಂಬ ನಿಟ್ಟಿನಲ್ಲಿ ಉನ್ನತ ಮಟ್ಟದ ತನಿಖೆ ಆರಂಭವಾಗಿದೆ.








