ಬೆಂಗಳೂರು : ಬೆಂಗಳೂರಿನಲ್ಲಿ ಬಿಡಿಎ ನಿವೇಶನ ಖರೀದಿಯಲ್ಲಿ ಭಾರಿ ಗೋಲ್ಮಾಲ್ ನಡೆದಿದ್ದು, ಮೂಲ ಮಾಲೀಕನ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಕೆ ಮಾಡಿ ಬಿಡಿಎ ನಿವೇಶನ ನೋಂದಣಿ ಮಾಡಿಕೊಂಡಿದ್ದ ಮೂವರು ಆರೋಪಿಗಳನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬಿಡಿಎನ ನಿವೃತ್ತ ವಿಶೇಷ ಸಹಾಯಕ ಚಿಕ್ಕರಾಯಿ ಕೆ.ಎನ್. (62), ಮುರುಳೀಧರ್ (60) ಹಾಗೂ ಮಂಜುನಾಥ್ (48) ಎಂದು ತಿಳಿದುಬಂದಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಜಿಲೆನ್ಸ್ ಅಧಿಕಾರಿಗಳು ನೀಡಿದ ದೂರಿನನ್ವಯ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಹಿನ್ನೆಲೆ?
ಅರ್ಕಾವತಿ ಬಡಾವಣೆಯ 2ನೇ ಬ್ಲಾಕ್‌ನಲ್ಲಿರುವ 40×60ರ ನಿವೇಶನ 2006ರಲ್ಲಿ ಬೈಲಪ್ಪ ಎಂಬುವರಿಗೆ ಹಂಚಿಕೆಯಾಗಿತ್ತು. ನಂತರ ಆ ನಿವೇಶನಕ್ಕೆ ಬದಲಿಯಾಗಿ ನಾಡಪ್ರಭು ಕೆಂಪೇಗೌಡ ಬಡಾವಣೆಯ 3ನೇ ಬ್ಲಾಕ್‌ನಲ್ಲಿರುವ ನಿವೇಶನವನ್ನು 2018ರಲ್ಲಿ ಮಂಜೂರು ಮಾಡಲಾಗಿತ್ತು. ಈ ನಡುವೆ 2019ರಲ್ಲಿ ಬೈಲಪ್ಪ ಅವರು ಮೃತಪಟ್ಟಿದ್ದರು.
ಆದ್ದರಿಂದ ನಿವೇಶನದ ಹಕ್ಕು ವರ್ಗಾವಣೆ ಕೋರಿ ಅವರ ಪತ್ನಿ ಲಕ್ಷ್ಮೀದೇವಮ್ಮ ಅವರು ಬಿಡಿಎಗೆ ಅರ್ಜಿ ಸಲ್ಲಿಸಿದ್ದರು. ಆದರೆ ಬಿಡಿಎ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ವ್ಯಕ್ತಿಯೊಬ್ಬ ತಾನೇ ಮೂಲ ಹಂಚಿಕೆದಾರ ಎಂದು ಅರ್ಜಿ ಸಲ್ಲಿಸಿ ಕೆಂಪೇಗೌಡ ಬಡಾವಣೆಯಲ್ಲಿಯೇ ಬದಲಿ ನಿವೇಶನ ಪಡೆದು ನೋಂದಣಿ ಮಾಡಿಕೊಂಡಿರುವುದು ಕಂಡುಬಂದಿತ್ತು.
ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಲಕ್ಷ್ಮೀದೇವಮ್ಮ ಅವರು ಬಿಡಿಎನಲ್ಲಿ ದೂರು ಸಲ್ಲಿಸಿದ್ದರು. ಬಿಡಿಎ ಆಧಿಕಾರಿಗಳು ಆಂತರಿಕ ವಿಚಾರಣೆ ನಡೆಸಿದಾಗ ಅಂದಿನ ವಿಶೇಷ ಸಹಾಯಕ ಕೆ. ಚಿಕ್ಕರಾಯಿ, ನಕಲಿ ಬೈಲಪ್ಪನ ಮಗ ಮಂಜುನಾಥ್, ಬ್ರೋಕರ್ ಮುರಳಿಧರ್, ಸಾಕ್ಷಿ ಸಹಿ ಮಾಡಿರುವ ದೇವೇಂದ್ರ ಹಾಗೂ ಇತರರ ಸಂಚು ಬಯಲಾಗಿತ್ತು.