ಬೆಂಗಳೂರು : ಯಾರು ಸ್ಥಾನ ಕೇಳುತ್ತಿದ್ದಾರೋ ಅವರ ನಾಯಕತ್ವದಲ್ಲೇ ಚುನಾವಣೆಯನ್ನು ಎದುರಿಸಲಿ, ಸರ್ಕಾರ ಅಧಿಕಾರಕ್ಕೆ ತಂದು ಅವರಿಗೆ ಯಾವ ಸ್ಥಾನ ಬೇಕೋ ಅದನ್ನು ಅಲಂಕರಿಸಲಿ. ಸಿಎಂ, ಪಿಎಂ, ಡಿಸಿಎಂ ಸೇರಿದಂತೆ ಏನೂ ಬೇಕಾದರೂ ಆಗಲಿ” ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಹೇಳಿದರು.
ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು “ನಮಗೆ ಡಿಸಿಎಂ, ಸಿಎಂ ಸ್ಥಾನ ಬೇಕು, ನಮ್ಮ ಜನಾಂಗಕ್ಕೆ ಅನ್ಯಾಯ ಆಗುತ್ತಿದೆ ಎನ್ನುವ ಭಾವನೆ ಇದ್ದರೆ. ಯಾರ ನಾಯಕತ್ವದಲ್ಲಿ ಬೇಕಾದರೂ ಚುನಾವಣೆ ಎದುರಿಸಲಿ ಜನ ತೀರ್ಪು ಕೊಡುತ್ತಾರೆ. ಈ ಹಿಂದೆ ರಾಮಕೃಷ್ಣ ಹೆಗಡೆ ಅವರು ಕಡಿಮೆ ಸ್ಥಾನ ಬಂದ ಕಾರಣಕ್ಕೆ ಮತ್ತೆ ಚುನಾವಣೆ ಎದುರಿಸಿದ್ದರು” ಎಂದರು.
“ಮುಖ್ಯಮಂತ್ರಿಗಳಿಗೆ ಅವಶ್ಯಕತೆ ಇದ್ದರೆ ಎಷ್ಟು ಜನ ಮಂತ್ರಿಗಳು, ಡಿಸಿಎಂಗಳನ್ನು ಬೇಕಾದರೂ ನೇಮಕ ಮಾಡಿಕೊಳ್ಳುವ ಪರಮಾಧಿಕಾರವಿದೆ. ಮುವತ್ತಮೂರು ಜನರನ್ನು ಡಿಸಿಎಂಗಳು ಎಂದು ಘೋಷಣೆ ಮಾಡಬಹುದು. ಇದಕ್ಕೆ ಸಾಂವಿಧಾನಿಕ ಮಾನ್ಯತೆ ಇದೆ” ಎಂದರು.
“ಜನರು ಸರ್ಕಾರವನ್ನು ಆಯ್ಕೆ ಮಾಡಿರುವುದು ಒಳ್ಳೆಯ ಆಡಳಿತ ನೀಡಲು ಹಾಗೂ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಲು. ಆದರೆ ಅದನ್ನು ಬಿಟ್ಟು ಇಲ್ಲ ಸಲ್ಲದ ಮಾತುಗಳನ್ನು ಆಡಲಾಗುತ್ತಿದೆ.
ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಜಾತಿ, ಧರ್ಮದವರು ಮತ ಹಾಕಿದ್ದಾರೆ. ಜಾತ್ಯಾತೀತ ತತ್ವ ಎಂದು ಬಾಯಲ್ಲಿ ಹೇಳಿ ನಾವೇ ಜಾತಿವಾದವನ್ನು ಮುಂದಿಟ್ಟುಕೊಂಡು ಜನರನ್ನು ಎತ್ತಿಕಟ್ಟುವ ಕೆಲಸ ಮಾಡಿದರೆ ಎಷ್ಟು ಸರಿ” ಎಂದು ಪ್ರಶ್ನಿಸಿದರು.
“ನಮ್ಮ ಕಷ್ಟಗಳಿಗೆ ಸರ್ಕಾರ ನೆರವಾಗುತ್ತದೆ ಎಂದು ಜನರು ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ. ಯಾರನ್ನೋ ಮಂತ್ರಿ ಮಾಡುತ್ತಾರೆ ಎಂದು ಪಕ್ಷವನ್ನು ಆಯ್ಕೆ ಮಾಡಿಲ್ಲ” ಎಂದು ಹೇಳಿದರು.
“33 ಜನರನ್ನು ಡಿಸಿಎಂ ಮಾಡಿದರೆ ಎಲ್ಲಾ ಜಾತಿ, ಧರ್ಮ, ಜಿಲ್ಲೆಯ ಜನರನ್ನು ಸಂತೃಪ್ತಿ ಪಡಿಸಬಹುದು. ಇದೇನು ಸಾಂವಿಧಾನಿಕ ಹುದ್ದೆಯಲ್ಲವಲ್ಲ” ಎಂದು ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ಶ್ರಮ ಹಾಕಿದವರೇ ಬೇರೆ ಸ್ಥಾನ ಕೇಳಿದವರೇ ಬೇರೆ ಎಂದಾಗ “ಅದರ ಬಗ್ಗೆ ನನಗೆ ಗೊತ್ತಿಲ್ಲ. 224 ಕ್ಷೇತ್ರದಲ್ಲಿ ಎಲ್ಲಾ ಕಾರ್ಯಕರ್ತರು, ನಾಯಕರು ಶ್ರಮ ಹಾಕಿದ್ದಾರೆ. 2 ವರ್ಷಗಳ ಕಾಲ ನಿರಂತರ ಹೋರಾಟ, ಹಗಲು, ರಾತ್ರಿ ಕೆಲಸ ಮಾಡಿ ಅಧಿಕಾರಕ್ಕೆ ತಂದಿದ್ದಾರೆ” ಎಂದು ಹೇಳಿದರು.
“ಶಾಸಕರು ಅಭಿವೃದ್ಧಿ ಕೆಲಸಗಳ ಕಡೆಗೆ ಗಮನ ನೀಡಬೇಕು, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಹಾಗೂ ಜನರ ಕಷ್ಟಗಳ ನಿವಾರಣೆಗೆ ಕೆಲಸ ಮಾಡಬೇಕು” ಎಂದು ಹೇಳಿದರು.
“ಜನಕ್ಕೆ ಚುನಾವಣೆ ನಡೆಯುವ ವೇಳೆ ಆಶ್ವಾಸನೆ ನೀಡಿರುತ್ತೇವೆ. ಈ ಆಶ್ವಾಸನೆಗಳನ್ನು ಸಿದ್ದರಾಮಯ್ಯ ಅವರ ಹಾಗೂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಹೋರಾಟ ಮಾಡಿ ಚುನಾವಣೆಯನ್ನು ಎದುರಿಸಲಾಯಿತು. ಜನರು ನಮಗೆ ಅವಕಾಶ ನೀಡಿದ್ದಾರೆ” ಎಂದರು.
“ಶಿವಕುಮಾರ್ ಅವರಿಗೆ ಸಿಎಂ ಸ್ಥಾನಕ್ಕಾಗಿ ಹೈಕಮಾಂಡಿಗೆ ಪತ್ರ ಬರೆಯುತ್ತೇನೆ ಎಂದು ಚಂದ್ರಶೇಖರನಾಥ ಸ್ವಾಮೀಜಿಗಳ ಹೇಳಿಕೆ ಬಗ್ಗೆ ಕೇಳಿದಾಗ “ಅದು ಸ್ವಾಮೀಜಿಗಳ ವೈಯಕ್ತಿಕ ಹೇಳಿಕೆ. ಅವರ ಸಮಾಜದ ಭಾವನೆ ತಿಳಿಸಿದ್ದಾರೆ. ಇದನ್ನು ಹೆಚ್ಚು ವ್ಯಾಖ್ಯಾನ ಮಾಡಲು ಇಚ್ಚಿಸುವುದಿಲ್ಲ” ಎಂದರು.
ಸಮುದಾಯಕ್ಕೆ ಒಬ್ಬೊಬ್ಬ ಸ್ವಾಮೀಜಿಗಳು ಹೇಳಿಕೆ ನೀಡುತ್ತಿರುವುದು ಸರಿಯೇ ಎಂದು ಕೇಳಿದಾಗ “ಸ್ವಾಮೀಜಿಗಳು ಮಾತಮಾಡಲು ಸ್ವತಂತ್ರರು. ಬೇರೆಯವರು ಮಾತನಾಡಬಹುದು ಅವರುಗಳು ಮಾತನಾಡಬಾರದೇ? ತಮ್ಮ ಭಾವನೆಗಳನ್ನು ಯಾವುದೋ ಒಂದು ಸಂದರ್ಭದಲ್ಲಿ ಹೊರ ಹಾಕಿದ್ದಾರೆ ಹೊರತು ಅದನ್ನು ಅನ್ಯತಾ ಭಾವಿಸುವುದು ಬೇಡ” ಎಂದರು.
ರಾಜಣ್ಣ ಅವರ ಸರಣಿ ಹೇಳಿಕೆಗಳ ಬಗ್ಗೆ ಕೇಳಿದಾಗ “ನಾನು ರಾಜಣ್ಣ ಅವರ ಬಗ್ಗೆ ಮಾತನಾಡಲು ಹೋಗುವುದಿಲ್ಲ. ನನಗೆ ಆ ಮಾತುಗಳು ಪ್ರಸ್ತುತವಲ್ಲ. ಜನರ ಆಶೀರ್ವಾದಕ್ಕೆ ತಕ್ಕಂತೆ ನಾವು ನಡೆದುಕೊಳ್ಳಬೇಕು ಜನರ ಆಶೋತ್ತರಗಳನ್ನು ಈಡೇರಿಸುವ ಕೆಲಸ ಮಾಡಬೇಕು ಎಂದು ಎಲ್ಲರಲ್ಲಿ ಮನವಿ ಮಾಡುತ್ತೇನೆ” ಎಂದರು.
ಸರ್ಕಾರಕ್ಕೆ ಈ ರೀತಿಯ ಹೇಳಿಕೆಗಳಿಂದ ಮುಜುಗರವಾಗುತ್ತಿಲ್ಲವೇ ಎಂದಾಗ “ಇದರ ಬಗ್ಗೆ ದೊಡ್ಡ, ದೊಡ್ಡವರನ್ನು ಕೇಳಿಕೊಳ್ಳಿ” ಎಂದರು.
ಸ್ವಾಮೀಜಿಗಳ ಹೇಳಿಕೆ ವೈಯಕ್ತಿಕವೇ ಅಥವಾ ಸಮುದಾಯದ ದನಿಯೇ ಎಂದಾಗ “ನಾನು ಸಹ ಮಾಧ್ಯಮಗಳಲ್ಲಿ ಈ ಹೇಳಿಕೆಗಳನ್ನು ನೋಡಿದೆ. ಇದರ ಬಗ್ಗೆ ನನಗೆ ಗೊತ್ತಿಲ್ಲ” ಎಂದು ಹೇಳಿದರು.
“ಸಿದ್ದರಾಮಯ್ಯ ಅವರ ಹಾಗೂ ಪರಮೇಶ್ವರ್ ಅವರ ಸಂಭಾಷಣೆ ಬಗ್ಗೆ ಕೇಳಿದಾಗ “ನನಗೆ ಗೊತ್ತಿಲ್ಲ. ಮಾಧ್ಯಮದವರು ಹೇಳಿಕೊಟ್ಟು ಹೇಳಿಸಿರಬಹುದು ಅವರನ್ನೇ ಕೇಳಿ” ಎಂದರು.
ಬಿಜೆಪಿ, ಜೆಡಿಎಸ್ ಅವರು ಕಾಯುತ್ತಿದ್ದಾರೆ
“ನಾನು ಸಲಹೆ ಕೊಡುವವನಲ್ಲ. ಕೇವಲ ಮನವಿ ಮಾಡುತ್ತಿದ್ದೇನೆ. ಇಲ್ಲದಿದ್ದರೆ ಚುನಾವಣೆ ಎದುರುಸಲಿ. ಇದಕ್ಕಾಗಿ ಬಿಜೆಪಿ,ಜೆಡಿಎಸ್ ಅವರು ಕಾಯುತ್ತಿದ್ದಾರೆ” ಎಂದು ಹೇಳಿದರು.
ಜಾಲಹಳ್ಳಿಯ HMT ಕ್ಯಾಂಪಸ್‌ನಲ್ಲಿ ಹೆಚ್ಚುವರಿ ಶೆಡ್‌ಗಳ ಮಂಜೂರಿಗೆ HD ಕುಮಾರಸ್ವಾಮಿಗೆ ಸಚಿವ ಪ್ರಿಯಾಂಕ್ ಖರ್ಗೆ ಮನವಿ
BIG NEWS: ‘ಶಿಕ್ಷಣ ಸಚಿವ’ರ ಕ್ಷೇತ್ರದಲ್ಲೇ ಲಂಚಾವತಾರ: ‘ಪೋನ್ ಪೇ’ ಮೂಲಕವೇ ‘SDA ಲಂಚ ಸ್ವೀಕಾರ’