ಬೆಂಗಳೂರು : ನಮ್ಮ ಸರ್ಕಾರದಲ್ಲಿ ಅಧಿಕಾರಿಗಳು ಜಾತ್ಯತೀತತೆಗೆ ಮತ್ತು ಸಂವಿಧಾನಕ್ಕೆ ಸಂಪೂರ್ಣ ಬದ್ದರಾಗಿರಬೇಕು. ಇಲ್ಲದಿದ್ದರೆ ಅಂಥವರಿಗೆ ಇಲ್ಲಿ ಮುಂದುವರೆಯಲು ಅವಕಾಶ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಗಳ ಆಡಳಿತ ಮೇಲುಸ್ತುವಾರಿಗಾಗಿ 31 ಜಿಲ್ಲೆ ಗಳಿಗೂ ಹಿರಿಯ ಐಎಎಸ್ ಅಧಿಕಾರಿಗಳನ್ನು ಜಿಲ್ಲಾ ಉಸ್ತು ವಾರಿ ಕಾವ್ಯದರ್ಶಿಗಳನ್ನಾಗಿ ನೇಮಕ ಮಾಡಿದ ಬಳಿಕ ಮೊದಲ ಸಲ ಬುಧವಾರ ವಿಧಾನಸೌಧದಲ್ಲಿ ಸಭೆ ನಡೆಸಿದ ಅವರು, ಪ್ರತಿ ಜಿಲ್ಲೆಯ ತಳಮಟ್ಟದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಅಧಿಕಾರಿಗಳಿಗೆ ಚಾಟಿ ಬೀಸಿದರು.
ಪರೋಕ್ಷವಾಗಿ ಮಂಡ್ಯ ಹಾಗೂ ಕಲಬುರಗಿ ವಿವಾದ ಉದ್ದೇಶಿಸಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಅವರು, ‘ನೀವು ಉಸ್ತುವಾರಿ ವಹಿಸಿದ ಮೇಲೆ ಆಡಳಿತಾತ್ಮಕವಾಗಿ ಏನು ಬದಲಾವಣೆ ಆಗಿದೆ? ನಿಮ್ಮಿಂದ ಜಿಲ್ಲಾಡಳಿತಕ್ಕೆ ಏನು ಸಲಹೆ ಸಿಕ್ಕಿದೆ? ನಿಮ್ಮ ಅನುಭವದ ಅನುಕೂಲ ಜಿಲ್ಲೆಗಳಿಗೆ ಎಷ್ಟಾಗಿದೆ’ ಎಂದು ಸಾಲು-ಸಾಲು ಪ್ರಶ್ನೆಗಳನ್ನು ಸುರಿಸಿದರು.
ಜಿಲ್ಲಾಧಿಕಾರಿಗಳಿಗೆ ಜ್ಯಾತ್ಯತೀತತೆಯ ಬದ್ಧತೆ ಇರಬೇಕು. ಸಂವಿಧಾನದ ಬಗ್ಗೆ ಗೌರವ ಇರಬೇಕು. ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಅಂತಹ ಅಧಿಕಾರಿಗಳಿಗೆ ಇಲ್ಲಿ ಮುಂದುವರೆಯುವ ಹಕ್ಕಿಲ್ಲ. ಅವಕಾಶವೂ ಇಲ್ಲ. ನಿಮ್ಮ ಹಂತದಲ್ಲಿ ಸಮಸ್ಯೆ ಬಗೆಹರಿಯದೆ ಹೋದರೆ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದು ಬಗೆಹರಿಸಬೇಕು. ಅದನ್ನು ಅಲ್ಲಿಗೇ ಬಿಡಬಾರದು ಎಂದು ಹೇಳಿದರು.