ಹುಬ್ಬಳ್ಳಿ : ಬಸವೇಶ್ವರ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರಕಾರ ಘೋಷಿಸಿರುವುದನ್ನು ರಾಜಕೀಯ ಎಂದು ಆರೋಪಿಸುವವರು ಕ್ಷುಲ್ಲಕ ಮನಸ್ಥಿತಿಯವರು ಎಂದು ಸಚಿವ ಎಚ್.ಕೆ.ಪಾಟೀಲ್ ಟೀಕಿಸಿದರು. ನಗರದಲ್ಲಿ ಮಾತನಾಡಿದ ಅವರು, ಬಸವಣ್ಣನವರು ಮಾನವ ಕುಲಕ್ಕೆ ಪ್ರಜಾಪ್ರಭುತ್ವದ ಕಲ್ಪನೆ ಕೊಟ್ಟವರು. ಅವರ ವಿಷಯದಲ್ಲಿ ರಾಜಕಾರಣ ಬೆರೆಸುವವರ ತಲೆಯಲ್ಲಿ ಕೇವಲ ರಾಜಕಾರಣ ಇದೆ. ಟೀಕಿಸುವವರು ಏನೂ ಮಾಡಲಿಲ್ಲ. ಅದಕ್ಕೆ ಇಲ್ಲ ಸಲ್ಲದ ಆರೋಪ ಮಾಡುತ್ತಾರೆ. ಇದು ಸರಿಯಲ್ಲ ಎಂದರು.
ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕನೆಂದು ನಿರ್ಣಯ ಮಾಡಿದ್ದಕ್ಕೆ ಸರಕಾರದ ನಿರ್ಣಯಕ್ಕೆ ಜನರು ಅಭಿಮಾನಪಟ್ಡಿದ್ದಾರೆ ಎಂದರು.ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿರುವುದು ನಾಡಿನ ಜನತೆಯಲ್ಲಿ ತೀವ್ರ ಸಂತಸ ಉಂಟು ಮಾಡಿದೆ. 12ನೇ ಶತಮಾನದಲ್ಲಿ ಅಲ್ಲಮಪ್ರಭು ಮತ್ತು ಬಸವಾದಿ ಶರಣರು ನಿರ್ಮಿಸಿದ “ಅನುಭವ ಮಂಟಪ” ಇಡೀ “ವಿಶ್ವದ ಪ್ರಪ್ರಥಮ ಶಾಸನ ಸಭೆ” ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಮೂಲ ಅಡಿಪಾಯವಾಗಿದೆ ಎಂದು ತಿಳಿಸಿದ್ದಾರೆ.
ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ “ಅನುಭವ ಮಂಟಪ” ದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಗೆ ನಾಂದಿ ಹಾಡಿ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ಚಿಂತನೆಗಳಿಗೆ ಹೊಸ ದಿಕ್ಕನ್ನು ತೋರಿಸಿದ ವಚನ ಚಳವಳಿ ಹರಿಕಾರ ವಿಶ್ವಗುರು ಬಸವಣ್ಣ ಅವರನ್ನು “ರಾಜ್ಯದ ಸಾಂಸ್ಕೃತಿಕ ನಾಯಕ” ಎಂದು ಘೋಷಣೆ ಮಾಡುವ ನಿರ್ಣಯ ಐತಿಹಾಸಿಕ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸ್ವಾಗತಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಹೊರಟ್ಟಿ, ಈ ನಿರ್ಣಯ ಕೈಗೊಂಡಿದ್ದಕ್ಕೆ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಎಲ್ಲ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.